ಹುಬ್ಬಳ್ಳಿ: ಚೀನಾ ವಿಷಯದಲ್ಲಿ ಯಾವುದೇ ರೀತಿಯ ರಾಜಿಗೆ ಭಾರತ ಸಿದ್ಧವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ರಾಷ್ಟ್ರೋತ್ಥಾನ ರಕ್ತನಿಧಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲೇಹ್ಗೆ ಪ್ರಧಾನಿ ಭೇಟಿ ನೀಡಿದ್ದು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು. ನಮ್ಮ ಗಡಿ, ನೆಲ, ಜಲ ವಿಷಯದಲ್ಲಿ ಭಾರತ ರಾಜಿಗೆ ತಯಾರಿಲ್ಲ. ಈ ಸಂದೇಶವನ್ನು ಪ್ರಧಾನಿಗಳ ಲೇಹ್ ಭೇಟಿ ಸಾಬೀತುಪಡಿಸಿದೆ ಎಂದರು.
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಅತ್ಯಂತ ಉತ್ತಮ ಆಡಳಿತವನ್ನು ಪ್ರಧಾನಿ ನೀಡಿದ್ದಾರೆ. ದೇಶಕ್ಕೆ ಮತ್ತು ಜಗತ್ತಿಗೆ ನಾಯಕತ್ವ ಏನು ಎಂಬುದನ್ನು ತೋರಿಸಿದ್ದಾರೆ. ಸಿದ್ದರಾಮಯ್ಯನವರು ಮನೆ ಮತ್ತು ಮನೆತನಕ್ಕೆ ಮೀಸಲಿಟ್ಟ ಕಾಂಗ್ರೆಸ್ ಪಕ್ಷದ ತಾಳಕ್ಕೆ ತಕ್ಕಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯಾವುದೇ ಕಾರಣಕ್ಕೂ ದೇಶದ ಒಂದು ಇಂಚು ಭೂಮಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅಲ್ಲದೇ ಎಲ್ಲಾ ರೀತಿಯ ಹೋರಾಟಕ್ಕೆ ಭಾರತ ಸಿದ್ಧವಾಗಿದೆ. ಆದರೆ ಭಾರತ ಶಾಂತಿಯನ್ನು ಪ್ರತಿಪಾದಿಸುತ್ತದೆ ಎಂದರು. ಕೊರೊನಾ ವಿಷಯದಲ್ಲಿ ಎಲ್ಲರೂ ಜಾಗೃತಿ ವಹಿಸಬೇಕು. ಇಲ್ಲಿಯವರೆಗೆ ಕೊರೊನಾ ಸಮುದಾಯಕ್ಕೆ ಹಬ್ಬಿದೆ ಎಂದು ನನಗೆ ಅನಿಸಿಲ್ಲಾ ಎಂದರು.