ಧಾರವಾಡ: ರಾಜಸ್ಥಾನ ಬಿಜೆಪಿಯಲ್ಲಿ ಭಿನ್ನಮತ ವಿಚಾರ ಸುಳ್ಳು. ವಸುಂಧರಾ ರಾಜೇ ಸೇರಿ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಸಿಎಂ ಸ್ಥಾನದ ತೀರ್ಮಾನ ಆಗುತ್ತದೆ. ಈ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸುವರ್ಣ ವಿಧಾನಸೌಧದ ಸಾರ್ವಕರ್ ಫೋಟೋ ವಿವಾದ ವಿಚಾರಕ್ಕೆ ಮಾತನಾಡಿದ ಅವರು, ಸ್ಪೀಕರ್ ಯು.ಟಿ.ಖಾದರ್ ನಡೆಯನ್ನು ಜೋಶಿ ಅಭಿನಂದಿಸಿದರು. ಸಾರ್ವಕರ್ ಫೋಟೋ ವಿಷಯದಲ್ಲಿ ವಿಧಾನಸಭೆ ಸ್ಪೀಕರ್ ನಿಲುವಿಗೆ ಅಭಿನಂದಿಸುತ್ತೇನೆ. 'ನಾನು ಕಿತ್ತೊಗೆಯಲು ಬಂದಿಲ್ಲ, ಜೋಡಿಸಲು ಬಂದಿದ್ದೇನೆ' ಎಂದಿದ್ದಾರೆ. ಈ ನಿಲುವು ಹಾಗೆಯೇ ಇರಬೇಕು. ಆಗ ಸದನ ಯಾವುದೇ ವಿವಾದ ಇಲ್ಲದೇ ನಡೆಯುತ್ತದೆ. ವಿಚಾರಧಾರೆಯನ್ನು ಒಪ್ಪುವುದು, ಬಿಡುವುದು ನಿಮಗೆ ಬಿಟ್ಟಿದ್ದು. ಆದರೆ ಸಾವರ್ಕರ್ ವಿಚಾರಧಾರೆ ಅನುಸರಿಸುವವರು ಅನೇಕರಿದ್ದಾರೆ. ಹೀಗಾಗಿ ಅಂಥ ವಿಚಾರಧಾರೆಯವರ ಫೋಟೋ ಕಿತ್ತೊಗೆಯುತ್ತೇನೆ ಎನ್ನುವುದು ಅಹಂಕಾರ. ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದರು. ಅದನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಅದರ ಪರಿಣಾಮವನ್ನು ಮೂರು ರಾಜ್ಯದಲ್ಲಿ ಅನುಭವಿಸಿದ್ದಾರೆ. ಈಗ ಪ್ರಿಯಾಂಕ್ ಖರ್ಗೆ ಅಂತಹದ್ದೇ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನ ಇನ್ನೂ ಹೆಚ್ಚು ಇವರನ್ನು ಅರ್ಥಮಾಡಿಕೊಳ್ಳುತ್ತಾರೆ. ನೆಹರೂ ವಿಚಾರಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇದೆ. ಹಾಗಂತ ನಾವು ನೆಹರೂ ಫೋಟೊ ತೆಗೆಯುತ್ತೇನೆ ಎನ್ನಲಾಗುತ್ತದೆಯೇ?. ನೆಹರು ಅವರನ್ನು ಒಪ್ಪುವವರು ಅನೇಕರಿದ್ದಾರೆ. ಹೀಗಾಗಿ ಫೋಟೋ ತೆಗೆಯುವ ವಿಚಾರ ಸರಿಯಲ್ಲ ಎಂದರು.
ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಮೊದಲು ಇವರದ್ದು ಯುಪಿಎ ಇತ್ತು. ಈಗ I.N.D.I.A ಮಾಡಿದ್ದಾರೆ. ಯಾಕೆ ಗೊತ್ತೇ? ₹12 ಲಕ್ಷ ಕೋಟಿಗೂ ಹೆಚ್ಚು ಹಗರಣ ಯುಪಿಎ ಅವಧಿಯಲ್ಲಿ ಆಗಿತ್ತು. ಅದರ ಬ್ರ್ಯಾಂಡ್ ನೇಮ್ ಹಾಳಾಗಿತ್ತು. ಹೀಗಾಗಿ ಇಂಡಿಯಾ ಅಂತಾ ಹೊಸ ಹೆಸರಿಟ್ಟಿದ್ದಾರೆ. ಮೂರು ರಾಜ್ಯಗಳಲ್ಲಿ ಅವರಿಗೆ ಗೆಲ್ಲಲಾಗಿಲ್ಲ. ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಕಾಂಗ್ರೆಸ್ 'ಭ್ರಷ್ಟಾಚಾರದಲ್ಲಿ ಸ್ಪರ್ಧೆ' ನಡೆಸುತ್ತಿದೆ ಎಂದು ಜೋಶಿ ಟೀಕಿಸಿದರು.
15 ಶಂಕಿತ ಐಸಿಸ್ ಉಗ್ರರ ಬಂಧನ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಆಡಳಿತ ಇದ್ದಲ್ಲಿ ಐಸಿಸ್ ಹಾವಳಿ ಹೆಚ್ಚಾಗಿದೆ. ಅವರು ದೇಶದಲ್ಲಿ ಅಭದ್ರತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮತಾಂಧ ಶಕ್ತಿಗಳು ಸತತ ಪ್ರಯತ್ನದಲ್ಲಿವೆ. ಕೇಂದ್ರ ಸರ್ಕಾರ ಆಂತರಿಕ ಸುರಕ್ಷತೆಯ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದೆ. ಮುಂದೆಯೂ ಸಹ ಅದೇ ಕಠಿಣ ನಿಲುವು ಇರುತ್ತದೆ ಎಂದರು.
ಇದನ್ನೂ ಓದಿ: 'ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ': ರಾಹುಲ್ ಗಾಂಧಿ ರಾಜೀನಾಮೆಗೆ ಎನ್.ರವಿಕುಮಾರ್ ಆಗ್ರಹ