ಧಾರವಾಡ: ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನನಗೆ ಗೊತ್ತಿಲ್ಲ, ಪ್ರಧಾನಿ ತೀರ್ಮಾನಿಸಿದಾಗ ವಿಸ್ತರಣೆಯಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳುತ್ತಾರೆ ಗೊತ್ತಿಲ್ಲ. ಅದು ಮೊದಲೇ ಗೊತ್ತಾಗುವುದಿಲ್ಲ. ಹಾಗಾಗಿ, ನಾನು ಉತ್ತರಿಸಲು ಅರ್ಹನಲ್ಲ ಎಂದರು.
ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಸಿ.ಪಿ. ಯೋಗೀಶ್ವರ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಯೋಗೇಶ್ವರ್ ಯಾವ ವಿವಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಅದರ ಕುಲಪತಿ ಅರುಣ್ ಸಿಂಗ್ ಉತ್ತರ ಕೊಟ್ಟಿದ್ದಾರೆ ಎಂದು ಕುಟುಕಿದರು.
ಓದಿ : ಕಾಂಗ್ರೆಸ್ಸಿಗರು ಸಿಎಂ ಆಗಲು ಬಿಜೆಪಿಯವರು ಸಪೋರ್ಟ್ ಮಾಡ್ತಿವಿ ಎಂದಿದ್ದಾರೆ: ಎಸ್ ಎಸ್ ಮಲ್ಲಿಕಾರ್ಜುನ್ ವ್ಯಂಗ್ಯ
ರಾಜ್ಯ ಬಿಜೆಪಿಯ ಆಂತರಿಕ ಕಚ್ಚಾಟದ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಮ್ಮಲ್ಲಿ ಯಾವುದೇ ಕಚ್ಚಾಟ ಇಲ್ಲ. ಸುತ್ತೂರು ಮಠಕ್ಕೆ ಶ್ರೀಗಳ ಮಾತೋಶ್ರೀ ನಿಧನರಾಗಿದ್ದಾರೆ. ಹಾಗಾಗಿ, ಸ್ವಾಮೀಜಿಯನ್ನು ಭೇಟಿಯಾಗಲು ರಾಜಕಾರಣಿಗಳು ಹೋಗಿದ್ದಾರೆ. ಎಲ್ಲವನ್ನೂ ರಾಜಕೀಯ ಅಂದರೆ ಹೇಗೆ? ಅದಕ್ಕೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಉಸಿರಾಟದ ಸಮಸ್ಯೆವಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಜೋಶಿ, ಸರ್ಕಾರದ ಶ್ವಾಸಕೋಶ ಸರಿಯಾಗಿವೆ. ಸರ್ಕಾರ ಸಹಜವಾಗಿ ಉಸಿರಾಡುತ್ತಿದೆ. ಶ್ವಾಸಕೋಶಗಳು ತುಂಬಾನೆ ಗಟ್ಟಿಯಾಗಿವೆ, ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಮಾರ್ಮಿಕವಾಗಿಯೇ ಹೇಳಿದರು.