ಹುಬ್ಬಳ್ಳಿ: ಏನೇ ಇದ್ದರೂ ರಾಜಕಾರಣಿಗಳಿಗೆ ನೈತಿಕತೆ ಮುಖ್ಯ, ಭಾರತೀಯ ರಾಜಕಾರಣಿಗಳಿಗೆ ವಿಶೇಷ ಗೌರವವಿದೆ. ನಮ್ಮನ್ನು ಅನುಕರಣೆ ಮಾಡುವ ಜನ ಇರುತ್ತಾರೆ, ನಾವು ಗೌರವದಿಂದ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಾರ್ವಜನಿಕ ಬದುಕಿನಲ್ಲಿದ್ದವರು ಗೌರವಯುತವಾಗಿ ಇರಬೇಕು. ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ ಎಂದರು.
ಇನ್ನೂ ಆರೋಗ್ಯ ಸಚಿವ ಡಿ. ಸುಧಾಕರ್ರವರ 'ಏಕಪತ್ನಿವೃತಸ್ಥ' ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸುಧಾಕರ್ ಹೇಳಿಕೆ ಸರಿಯಲ್ಲ. ಆ ರೀತಿ ಹೇಳಿಕೆ ಕೊಡಬಾರದಿತ್ತು. ಬೇರೆಯವರನ್ನು ನೋಡಿ ನಾವು ಅನುಸರಿಸುವುದಲ್ಲ. ನಮಗೆ ನಾವು ಸರಿಯಾಗಿ ಇರಬೇಕು ಎಂದು ಅವರು ಹೇಳಿದರು.
ಇದೆಲ್ಲಾ ಬೆಳಗಾವಿ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನರೇಂದ್ರ ಮೋದಿ, ಸುರೇಶ ಅಂಗಡಿಯವರು ಮಾಡಿದ ಅಭಿವೃದ್ಧಿ ಕೆಲಸದ ಮೇಲೆ ಚುನಾವಣೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.