ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯ ಆಕ್ಸಫರ್ಡ್ ಕಾಲೇಜಿನ ಸಮೀಪದಲ್ಲಿ ಇಬ್ಬರು ಬೈಕ್ ಸವಾರರು ಸಾವಿಗೀಡಾಗಿದ್ದರು. ಜನರು ಬೈಕ್ನಿಂದ ಬಿದ್ದು, ಸಾವಿಗೀಡಾಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಘಟನೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಡೆದಿದೆ ಎಂದು ಪೂರ್ವ ಸಂಚಾರಿ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಅಪಘಾತದ ಬಗೆಗಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಬಾಗಲಕೋಟೆ ಮೂಲದ ಸಂತೋಷ ಮತ್ತು ಭೀಮಾನಂದ ಬೈಕ್ನಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿತ್ತು. ಘಟನೆಗೆ ಕಾರಣವಾಗಿದ್ದ ಲಾರಿ ಚಾಲಕ ಶಿವಾನಂದ ಬಂಡಿ ಏನೂ ನಡೆದೇ ಇಲ್ಲವೆಂಬಂತೆ ಲಾರಿಯನ್ನು ರಿಪೇರಿ ಮಾಡಿಸಿ ವಿಆರ್ಎಲ್ ಕಂಪನಿಗೆ ಬಿಟ್ಟಿದ್ದ.
ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ ಪೊಲೀಸರು ಲಾರಿ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಇನ್ಸ್ಪೆೆಕ್ಟರ್ ಕಾಡದೇವರಮಠ ತಂಡ ಯಾವುದೇ ಕುರುಹುಗಳಿಲ್ಲದ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.