ಹುಬ್ಬಳ್ಳಿ: ಬಿಜೆಪಿಯವರು ಭ್ರಷ್ಟಾಚಾರದ ಹಣದಿಂದ ಸಮಾವೇಶ ಮಾಡಿ ಜನರಿಗೆ ಬಿರಿಯಾನಿ ಊಟ ಹಾಕಿಸುತ್ತಿದ್ದಾರೆ. ಆದರೆ, ಜನರು ಬಿರಿಯಾನಿ ತಿಂದು ಎದ್ದು ಹೋಗುತ್ತಿದ್ದಾರೆ. ಆ ಮೇಲೆ, ಬಿಜೆಪಿಯವರು ಖಾಲಿ ಚೇರ್ಗಳಿಗೆ ಭಾಷಣ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಕಣ್ಣೀರು ಒರೆಸುತ್ತೇವೆಂದು ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಟ್ಟು ತದನಂತರ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿದ್ದಾರೆ. ಕಿಸಾನ್ ಸಮ್ಮಾನ ಹೆಸರಿನಲ್ಲಿ ರೈತರಿಗೆ ಎಕರೆಗೆ 6000 ಹಣ ಕೊಟ್ಟು ಬೇರೆಡೆಯಿಂದ 60000 ಹಣ ಪಡೆದಿದ್ದಾರೆ. ಇದೀಗ ವಿದ್ಯುತ್ ಖಾಸಗೀಕರಣಗೊಳಿಸಿ ರೈತರಿಗೆ ಕೊಡುವ ಉಚಿತ ವಿದ್ಯುತ್ ಅನ್ನು ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷ ವಿಶೇಷವಾಗಿ ಹಿಂದುಳಿದ ಜನರ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸುತ್ತದೆ. ಅದೇ ಬಿಜೆಪಿ ಜಾತಿ ಧರ್ಮದ ಮೇಲೆ ರಾಜಕಾರಣ ಮಾಡುತ್ತಿದೆ. ಇದರಿಂದ ರಾಜ್ಯದ ಜನರು ಬೇಸತ್ತು ಹೋಗಿದ್ದು, ಬದಲಾವಣೆ ಬಯಸಿದ್ದಾರೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎಂದರು.
ಇದನ್ನೂ ಓದಿ: ಮೂಗಿಗೆ ತುಪ್ಪ ಸವರುವ ಕೆಲಸ ಇನ್ಮುಂದೆ ನಡೆಯಲ್ಲ: ಬಿಜೆಪಿಗೆ ಆಶ್ವಾಸನೆಗೆ ಮಧು ಬಂಗಾರಪ್ಪ ಕಿಡಿ