ಹುಬ್ಬಳ್ಳಿ: ಕೊರೊನಾ ಸಂದರ್ಭದಲ್ಲಿ ಈಡಿ ದೇಶವನ್ನೇ ಲಾಕ್ಡೌನ್ ಮಾಡಲಾಗಿತ್ತು, ಆ ಸಮಯವನ್ನೇ ಬಳಕೆ ಮಾಡಿಕೊಂಡಿರುವ ನಗರದ ಬಾಲಕನೊಬ್ಬ ವಿವಿಧ ಹೆಸರಾಂತ ನಾಯಕರು ಸೇರಿದಂತೆ ಹಲವಾರು ನೈಸರ್ಗಿಕ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಹುಬ್ಬಳ್ಳಿಯ ಅಭಿನವ ಚಕ್ರವರ್ತಿ ಎಂಬ ಬಾಲಕ ತನ್ನ ಕೈಚಳಕದಿಂದ ರೇಖಾ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಹೆಸರಾಂತ ಕಲಾವಿದ ಪಾಬ್ಲೋ ಪಿಕಾಸೋ ಮಾದರಿಯಲ್ಲಿ ಚಿತ್ರ ಬಿಡಿಸುವ ಹವ್ಯಾಸ ಮಾಡಿಕೊಂಡಿದ್ದಾನೆ.
ಇವನ ಕೈ ಚಳಕದಲ್ಲಿ ಮೂಡಿ ಬಂದಿರುವ, ಬೆಡ್ ಮೇಲೆ ರೋಗಿ, ಸಮವಸ್ತ್ರವನ್ನು ಧರಿಸಿದ ವೈದ್ಯರು, ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ಗಳು, ಹಡಗು, ವಿಮಾನ, ಹೆಲಿಕಾಪ್ಟರ್, ಬೆಟ್ಟ ಗುಡ್ಡಗಳು, ಹಣ್ಣು ತರಕಾರಿ, ಮೂಶಿಕ ವಾಹನ ಗಣಪ, ಇನ್ನೂ ಜಗತ್ತನ್ನು ಕಿತ್ತು ತಿನ್ನುತ್ತಿರುವ ಕೊರೊನಾ ಮಹಾಮಾರಿ ಚಿತ್ರಗಳನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಅಷ್ಟೇ ಅಲ್ಲದೇ ಈತ ತನ್ನ ಸ್ವಂತಿಕೆಯಲ್ಲಿ ಚಿತ್ರ ಬಿಡಿಸಿ ಅದರ ವಿಶ್ಲೇಷಣೆ ಸಹ ನೀಡುತ್ತಾನೆ. ನಾಲ್ಕು ವರ್ಷದ ಬಾಲಕನ ಸಾಧನೆಗೆ ಕುಟುಂಬಸ್ಥರು ಅಭಿನವ ಚಕ್ರವರ್ತಿ ಚಿತ್ರಕಲಾ ಸಂಭ್ರಮ ಎಂಬ ಪ್ರದರ್ಶನ ಏರ್ಪಡಿಸಿದ್ದಾರೆ. ಈತನ ಚಿತ್ರಕಲೆ ನೋಡಿದ ಕಲಾವಿದರು ಹಾಗೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.