ಹುಬ್ಬಳ್ಳಿ: ರಾಜ್ಯದಲ್ಲಿ ಭಾಗಶಃ ಲಾಕ್ಡೌನ್ ಹೇರಿರುವ ರಾಜ್ಯ ಸರ್ಕಾರ ಬಾರ್, ಬ್ಯೂಟಿ ಪಾರ್ಲರ್, ಸಲೂನ್ಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ ದೂರದಿಂದಲೇ ಸೇವೆ ನೀಡುವ ಫೋಟೋ ಸ್ಟುಡಿಯೋಗಳನ್ನು ಬಂದ್ ಮಾಡಿಸಿದ್ದಕ್ಕೆ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘ ವಿರೋಧ ವ್ಯಕ್ತಪಡಿಸಿದೆ.
ಕೋವಿಡ್ನಿಂದಾಗಿ ಕಳೆದ ವರ್ಷ ಲಾಕ್ಡೌನ್ ವೇಳೆ ಸ್ಟುಡಿಯೋಗಳು ಬಂದ್ ಆಗಿದ್ದವು. ಮದುವೆ ಸಮಾರಂಭಗಳು ನಡೆಯದೆ ಛಾಯಾಗ್ರಾಹಕರು ನಷ್ಟ ಅನುಭವಿಸಿದ್ದರು. ಈ ವರ್ಷವೂ ಕೂಡ ಸರ್ಕಾರ ಮದುವೆ ಸಮಾರಂಭಗಳಿಗೆ ಷರತ್ತುಬದ್ಧ ಅವಕಾಶ ನೀಡಿ ಫೋಟೋ ಸ್ಟುಡಿಯೋಗಳನ್ನು ಬಂದ್ ಮಾಡಿಸುತ್ತಿದೆ.
ಮದುವೆ ಮತ್ತಿತರ ಸಮಾರಂಭಗಳಲ್ಲಿ ಛಾಯಾಗ್ರಹಕರು ಪ್ರತ್ಯೇಕ ಸ್ಥಳದಲ್ಲಿದ್ದು, ಅಂತರ ಕಾಯ್ದುಕೊಂಡು ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುತ್ತಾರೆ. ಆದರೆ ಸಲೂನ್ ಪಾರ್ಲರ್ಗಳಲ್ಲಿ ತಲೆ, ಮೈ ಮುಟ್ಟಿ ಸೇವೆ ನೀಡುವ ಅವರಿಗೆ ಅವಕಾಶ ನೀಡಿದ್ದಾರೆ. ಇದು ಸರಿಯಲ್ಲ. ಯಾರ ಸಂಪರ್ಕಕ್ಕೂ ಹೋಗದೆ ಸೇವೆ ಮಾಡುವ ಫೋಟೋ ಸ್ಟುಡಿಯೋ ಬಂದ್ ಮಾಡಿಸಿದ್ದು ಅವೈಜ್ಞಾನಿಕ ಕ್ರಮ.
ಸೋಮವಾರದಿಂದ ಎಲ್ಲಾ ಫೋಟೋ ಸ್ಟುಡಿಯೋಗಳನ್ನು ತೆರೆಯಲು ಅನುಮತಿ ನೀಡಬೇಕು. ನಮಗೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ನೀಡಿದರೆ ನಾವು ಕೂಡ ಅದನ್ನು ಪಾಲಿಸಿ ಆ ಮಾರ್ಗಸೂಚಿ ಪ್ರಕಾರ ಅಂಗಡಿಗಳನ್ನು ತೆರೆಯುತ್ತೇವೆ ಎಂದು ಫೋಟೋಗ್ರಾಫರ್ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.