ಹುಬ್ಬಳ್ಳಿ : ರಾಜ್ಯದಲ್ಲಿ ದಿನೇದಿನೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿವೆ. ಸರ್ಕಾರ ರೆಡ್ ಅಲರ್ಟ್ ಜಿಲ್ಲೆಗಳೆಂದು ಘೋಷಿಸಿರುವ ಪೈಕಿ ಧಾರವಾಡ ಜಿಲ್ಲೆಯೂ ಒಂದು. ಹೀಗಾಗಿ, ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಮುಂಜಾಗೃತಾ ಕ್ರಮಕೈಗೊಂಡಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಮತ್ತೆ ನಿತ್ಯ ಹತ್ತಕ್ಕಿಂತೂಲೂ ಹೆಚ್ಚು ಹೊಸ ಕೋವಿಡ್ ಪ್ರಕರಣ ವರದಿಯಾಗುತ್ತಿವೆ. ಈವರೆಗೆ ಒಟ್ಟು 22, 527 ಪ್ರಕರಣ ಪತ್ತೆಯಾಗಿವೆ. 21,806 ಜನ ಗುಣಮುಖರಾಗಿದ್ದಾರೆ. 622 ಜನ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಪ್ರಕರಣ ಮತ್ತೆ ಉಲ್ಬಣಗೊಳ್ಳುತ್ತಿದ್ದರೂ ಜನ ಮಾತ್ರ ಈ ಬಗ್ಗೆ ತಲೆಕಡೆಸಿಕೊಂಡಂತಿಲ್ಲ.
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಬೇಕಾ ಬಿಟ್ಟಿ ಓಡಾಡುತ್ತಿದ್ದಾರೆ. ಹೀಗಾಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ತಾಕೀತು ನೀಡಿದ್ದಾರೆ.
ಓದಿ : ಸಿಲಿಕಾನ್ ಸಿಟಿಯಲ್ಲಿ 1,048 ಮಂದಿಗೆ ತಗುಲಿದ ಸೋಂಕು
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿ ಸೇರಿ ಜಿಲ್ಲೆಯಾದ್ಯಂತ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರು ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಪಾಲಿಸದೆ ಓಡಾಡುತ್ತಿದ್ದರೂ ಅಧಿಕಾರಿಗಳು ದಂಡ ವಿಧಿಸದೆ ನಿರ್ಲಕ್ಷ್ಯ ತೋರಿದ್ದರು.
ಹೀಗಾಗಿ, ನೋಟಿಸ್ ಜಾರಿ ಮಾಡಿದ್ದ ಜಿಲ್ಲಾಧಿಕಾರಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳದಿರುವುದಕ್ಕೆ ಕಾರಣ ಕೇಳಿದ್ದಾರೆ. ಜಿಲ್ಲಾಧಿಕಾರಿಗಳ ಎಚ್ಚರಿಕೆಯ ಬಳಿಕ ಎಚ್ಚೆತ್ತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.