ಹುಬ್ಬಳ್ಳಿ : ಜನರ ವಿರೋಧದ ನಡುವೆಯೂ ಅಂದು ಜಗದೀಶ್ ಶೆಟ್ಟರ್ ಸಿಎಂ ಇದ್ದಾಗ ಅಂಚಟಗೇರಿ ಗ್ರಾಮದ 56.13 ಎಕರೆ ಭೂಮಿಯನ್ನು ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕೊಟ್ಟಿದ್ದರು.
ಅಧಿಕಾರ ಹೋಗ್ತಿದ್ದಂತೆ ಯೋಜನೆ ನೆನಗುದಿಗೆ ಬಿದ್ದಿತ್ತು. ಆದರೆ, ಮತ್ತೆ ಆ ಯೋಜನೆಗೆ ಮರು ಜೀವ ಬಂದಿದೆ. ಜಿಲ್ಲಾಡಳಿತ ಸಭೆ ಮೇಲೆ ಸಭೆ ಮಾಡಿ ಮನವೊಲಿಸಿದರೂ ಗ್ರಾಮಸ್ಥರು ಕೇಳ್ತಿಲ್ಲ.
ಹುಬ್ಬಳ್ಳಿಯ ಅಂಚಟಗೇರಿ ಗ್ರಾಮಸ್ತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಮತ್ತೆ ಮತ್ತೆ ಸಭೆ ನಡೆಸಿದರೂ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗ್ರಾಮದ ಗೋಮಾಳ ಭೂಮಿ ಮೇಲೆ ಸರ್ಕಾರ ಕಣ್ಣು ಹಾಕಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಗೋಮಾಳ ಬಿಟ್ಟರೆ ಗ್ರಾಮದಲ್ಲಿ ಖಾಲಿ ಜಾಗವಿಲ್ಲ. ಜಾನುವಾರುಗಳ ಮೇವಿಗೆ ತೊಂದರೆಯಾಗಲಿದೆ. ಆಶ್ರಯ ಮನೆ ಕಟ್ಟುವುದಕ್ಕೆ ಇದೊಂದೇ ಸ್ಥಳವಿರೋದು. ಇಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಿದರೆ, ಸ್ವಚ್ಛ ಗ್ರಾಮವೆಂದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಗ್ರಾಮದಲ್ಲಿ ವಾಯು ಮಾಲಿನ್ಯ ಹೆಚ್ಚಾಗಲಿದೆ. ಟ್ರಕ್‌ಗಳ ನಿಲುಗಡೆ, ಟ್ರಕ್ ರಿಪೇರಿ ನಡೆಯುವುದರಿಂದ ಸಾಕಷ್ಟು ತೊಂದರೆಯಾಗಲಿದೆ ಎನ್ನುವುದು ಗ್ರಾಮಸ್ಥರ ಅಳಲು.
ಟ್ರಕ್ ಟರ್ಮಿನಲ್ ಬದಲಿಗೆ ಆಸ್ಪತ್ರೆ ಹಾಗೂ ಕಾಲೇಜು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೆ ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳನ್ನು ಜನರು ಹಿಂದಕ್ಕೆ ಕಳುಹಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸ್ಥಳೀಯರಿಗೆ ಮನವರಿಕೆ ಮಾಡಿಕೊಡಲಾಗಿದೆ. ಗ್ರಾಮಸ್ಥರು ಸಹಮತ ವ್ಯಕ್ತಪಡಿಸಲಿದ್ದಾರೆ ಎಂಬ ವಿಶ್ವಾಸವನ್ನು ಜಿಲ್ಲಾಧಿಕಾರಿ ವ್ಯಕ್ತಪಡಿಸಿದ್ದಾರೆ.
ಅಂದು ಸಿಎಂ ಆಗಿದ್ದಾಗ ಸಾಕಷ್ಟು ಪ್ರಯತ್ನ ಪಟ್ಟಿದ್ದ ಶೆಟ್ಟರ್, ಸದ್ಯ ಮತ್ತೆ ಶತ ಪ್ರಯತ್ನ ಮಾಡುತ್ತಿದ್ದಾರೆ. ಈ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಮುಂದಾಗಿರುವವರ ವಿರುದ್ದ ಗ್ರಾಮಸ್ಥರು ತಿರುಗಿ ಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲು ಸಿದ್ದವಾಗಿರೋದು ಶೆಟ್ಟರ್ಗೆ ಬಿಸಿ ತುಪ್ಪವಾಗಿದೆ.
ಓದಿ: ಕಷ್ಟದಲ್ಲಿದ್ದಾಗ ಕೆಲಸ ಕೊಟ್ಟು ಕೈಹಿಡಿದ ಮಾಲೀಕನ ಅಂಗಡಿಯಲ್ಲಿ 30 ಲಕ್ಷ ರೂ. ದೋಚಿದ್ದ ಆರೋಪಿ ಅರೆಸ್ಟ್!