ಹುಬ್ಬಳ್ಳಿ(ಧಾರವಾಡ): ತೀವ್ರ ವಿವಾದದ ನಡುವೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟ್ಯಾಕ್ಸಿ ವಾಹನ ನಿಲುಗಡೆಗೆ ಹು-ಧಾ ಮಹಾನಗರ ಪಾಲಿಕೆ ಕೊನೆಗೂ ಅವಕಾಶ ನೀಡಿದೆ. ಇಂದು ಬೆಳಗ್ಗೆಯಿಂದಲೇ ವಾಹನಗಳ ನಿಲುಗಡೆ ಪ್ರಾರಂಭವಾಗಿದೆ. ಈ ಕುರಿತಂತೆ ಈಟಿವಿ ಭಾರತ ಸುದ್ದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಗಣೇಶ ಚತುರ್ಥಿ ಆಚರಣೆ ಅಂಗವಾಗಿ ಈದ್ಗಾ ಮೈದಾನದಲ್ಲಿ ಟ್ಯಾಕ್ಸಿ ವಾಹನ ನಿಲುಗಡೆಯನ್ನು 13 ದಿನಗಳ ಕಾಲ ನಿರ್ಬಂಧಿಸಿ ಹು-ಧಾ ಪಾಲಿಕೆ ಆದೇಶ ಹೊರಡಿಸಿತ್ತು. ಆದ್ರೆ ಅವಧಿ ಮುಗಿದರೂ ಕೂಡ ಟ್ಯಾಕ್ಸಿ ನಿಲ್ಲಿಸಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ವಾಹನ ನಿಲುಗಡೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಈದ್ಗಾ ವಿವಾದ ಎಫೆಕ್ಟ್: ಪಾರ್ಕಿಂಗ್ ಇಲ್ಲ, ದುಡಿಮೆಯೂ ಇಲ್ಲ.. ಬಡಪಾಯಿಗಳ ಗೋಳು
ಈ ಪ್ರತಿಭಟನೆಗೆ ಮಣಿದ ಹು-ಧಾ ಪಾಲಿಕೆ ಮತ್ತೆ ಟ್ಯಾಕ್ಸಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಮಹಾನಗರ ಪಾಲಿಕೆ, ಚೆನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್ನಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ. ಟ್ಯಾಕ್ಸಿ ಚಾಲಕರು ಕೂಡ ಈ ಮೊದಲಿನಂತೆ ತಮ್ಮ ವಾಹನಗಳನ್ನು ಈದ್ಗಾ ಮೈದಾನದಲ್ಲಿ ಪಾರ್ಕ್ ಮಾಡುತ್ತಿದ್ದಾರೆ.