ಧಾರವಾಡ: ಮಹಾರಾಷ್ಟ್ರದಲ್ಲಿ ಬಿಜೆಪಿಯವರು ಶಿವಸೇನೆಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಬಿಜೆಪಿಗೆ ಅಧಿಕಾರದ ಮದ ಬಂದಿದೆ. ಮೊದಲು 50-50 ಅಧಿಕಾರ ಅಂತಾ ಮಾತು ಕೊಟ್ಟು ಈಗ ಮರೆತಿದ್ದಾರೆ ಎಂದು ಧಾರವಾಡದಲ್ಲಿ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲಕ್ಕೆ ಶಿವಸೇನೆಯೇ ನಂ.1 ಆಗಿತ್ತು. ಇನ್ನೂ ಬಿಜೆಪಿ ನಂ. 2ನೇ ಸ್ಥಾನದಲ್ಲಿತ್ತು. ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು. ಮಹಾರಾಷ್ಟ್ರದ ಹಿತದೃಷ್ಟಿಯಿಂದ ಶಿವಸೇನೆ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಬಿಜೆಪಿ ಮಹದಾಯಿ ವಿಷಯದಲ್ಲಿ ಮಲತಾಯಿ ಧೋರಣೆ ಅನುರಿಸುತ್ತಿದೆ. 25 ಎಂಪಿಗಳಿದ್ದರೂ ರಾಜ್ಯದ ಬಗ್ಗೆ ಧ್ವನಿ ಕೂಡ ಎತ್ತದಷ್ಟೂ ದುರ್ಬಲರಾಗಿದ್ದಾರೆ. ಇನ್ನು ಇಲ್ಲಿಯ ಸಿಎಂಗಂತೂ ಕೇಂದ್ರದಲ್ಲಿ ಯಾವ ಗೌರವ, ಬೆಲೆಯೂ ಸಿಗುತ್ತಿಲ್ಲ. ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲಿ ಬಂದಿರೋದು ಕರ್ನಾಟಕಕ್ಕೆ ಒಂದು ದೊಡ್ಡ ಶಾಪವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಮಾತನಾಡಿದ ಮೊಯ್ಲಿ ಅವರು, ಟಿಪ್ಪು ಉತ್ಸವ ಮಾಡೋದು ಬಿಡೋದು ಇಲ್ಲಿ ವಿಷಯವಲ್ಲ. ಆದರೆ, ಮತೀಯ ದೃಷ್ಟಿಯಿಂದ ಟಿಪ್ಪುವನ್ನು ಇತಿಹಾಸ ಪಠ್ಯದಿಂದ ತೆಗೆಯುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಪಕ್ಷದಲ್ಲಿ ಗುಂಪುಗಾರಿಕೆ ಮತ್ತು ಜಾತೀಯತೆ ಮಾಡುವುದೂ ಸರಿಯಲ್ಲ ಎಂದು ಹೇಳಿದರು.