ಹುಬ್ಬಳ್ಳಿ: ಎಷ್ಟೋ ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಶಾಲೆಗಳನ್ನು ಮರೆಯುತ್ತಾರೆ. ಆದರೆ, ಇಲ್ಲಿರುವ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಶಾಲೆಯನ್ನು ಅಂದವಾಗಿ, ಆಕರ್ಷಕವಾಗಿ ಕಾಣುವಂತೆ ಮಾಡುವ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಹೀಗೆ ಕೈಯಲ್ಲಿ ಬಣ್ಣದ ಕುಂಚ ಹಿಡಿದುಕೊಂಡು ಬಣ್ಣ ಬಳೆಯುತ್ತಿರುವವರು ಕಾರ್ಮಿಕರಲ್ಲ. ಇವರೆಲ್ಲ ಇದೆ ಶಾಲೆಯಲ್ಲಿ ಓದಿ ಬಾಳು ಕಟ್ಟಿಕೊಂಡವರು. ತಮ್ಮ ಹಾಗೂ ನೆರೆ-ಹೊರೆಯ ಶಾಲೆಯ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳ ಸಂಘ ಕಟ್ಟಿಕೊಂಡು ಕನ್ನಡ ಶಾಲೆಯನ್ನು ಸುಂದರವಾಗಿಸುವ ಸದುದ್ದೇಶ ಹೊಂದಿದ್ದಾರೆ. ಶಾಲೆಗಳಿಗೆ ಬಣ್ಣ ಹಚ್ಚಿ ಸುಂದರ ಕಲಾಕೃತಿಗಳನ್ನು ರಚಿಸುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.
ಈಗಾಗಲೇ ಹಳೆ ವಿದ್ಯಾರ್ಥಿಗಳ ಸಂಘದಿಂದ ಸುಮಾರು ಒಂಬತ್ತು ಶಾಲೆಗಳಿಗೆ ಬಣ್ಣ ಹಚ್ಚಿ ಅಲಂಕರಿಸುವ ಮೂಲಕ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ಕಣ್ಮನ ಸೆಳೆಯುವಂತೆ ಮಾಡಲು ಸ್ವಯಂ ಪ್ರೇರಿತರಾಗಿ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ಈ ಹಳೆ ವಿದ್ಯಾರ್ಥಿಗಳ ಸಂಘದಲ್ಲಿ ಪೊಲೀಸ್, ವೈದ್ಯರು, ಶಿಕ್ಷಕರು ಸೇರಿದಂತೆ ಸಮಾಜ ಸೇವೆ ಮನೋಭಾವದ ದೊಡ್ಡ ತಂಡವೇ ಈ ಸಂಘಟನೆಯಲ್ಲಿ ಕೈ ಜೋಡಿಸಿದೆ.
ಇನ್ನೂ ಕನ್ನಡ ಶಾಲೆಯ ಕುರಿತಾಗಿ ಜನರಲ್ಲಿದ್ದ ಕೀಳರೆಮೆಯನ್ನು ಹೊರದೂಡಿ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿಯೇ ತಮ್ಮ ಮಕ್ಕಳನ್ನು ಓದಿಸುವಂತಾಗಲಿ ಎಂಬುವುದು ಹಳೆಯ ವಿದ್ಯಾರ್ಥಿಗಳ ಸಂಘದ ಆಶಯವಾಗಿದೆ. ಅಲ್ಲದೇ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಇಮ್ಮಡಿಗೊಳಿಸಿ ಶಾಲೆಗಳ ಅಭಿವೃದ್ಧಿಯಾಗಬೇಕು ಎಂಬ ಸದುದ್ದೇಶದಿಂದ ಹಳೆ ವಿದ್ಯಾರ್ಥಿಗಳ ಸಂಘ ಈ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೇ ಧಾರವಾಡ ಹಾಗೂ ಹಾವೇರಿ ಜಿಲ್ಲೆಯ ಬಹುತೇಕ ಶಾಲೆಗಳಿಗೆ ಬಣ್ಣ ಹಚ್ಚಿ ಶಾಲೆಗಳು ಬಣ್ಣ - ಬಣ್ಣದಿಂದ ಕಂಗೊಳಿಸುವಂತೆ ಮಾಡಲು ಈ ವಿದ್ಯಾರ್ಥಿಗಳ ಸಂಘ ಕಾರಣವಾಗಿದೆ.
ನಾವು ಕಲಿತ ಸರ್ಕಾರಿ ಮಾದರಿ ಶಾಲೆಗಳು ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡಿವೆ. ಇತರ ಮಕ್ಕಳು ಕೂಡ ಈ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗೆ ಏರುವಂತಾಗಬೇಕು. ಕನ್ನಡ ಶಾಲೆ ಉಳಿಯಬೇಕು ಎಂಬ ಈ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.