ಹುಬ್ಬಳ್ಳಿ: ಲಾಕ್ಡೌನ್ ಸಮಯದ ಸದ್ಬಳಕೆ ಮಾಡಿಕೊಂಡಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ನಿರುಪಯುಕ್ತ ವಸ್ತುಗಳನ್ನು ಅಗತ್ಯ ವಸ್ತುಗಳಾಗಿ ಪರಿವರ್ತಿಸಿದ್ದಾರೆ.
ಹುಬ್ಬಳ್ಳಿ ವಿಭಾಗೀಯ ಕಾರ್ಯಾಗಾರದ ನೌಕರರು ಸ್ವಚ್ಚತಾ ಪರಿಕರ, ದುರಸ್ತಿ ಕಾರ್ಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಗುಜರಿ ವಸ್ತುಗಳಿಂದ ರೆಡಿ ಮಾಡಿದ್ದಾರೆ. ಕೊರೊನಾ ನಿರ್ಬಂಧದ ಕಾಲಾವಧಿಯಲ್ಲಿ ಬಸ್ಸುಗಳ ರಿಪೇರಿ ಕೆಲಸ ಕಡಿಮೆ ಇತ್ತು. ಹೀಗಾಗಿ, ಈ ಕೆಲಸದ ಮೂಲಕ ಸಾರಿಗೆ ವಿಭಾಗಕ್ಕೆ ಲಕ್ಷಾಂತರ ರೂಪಾಯಿ ಉಳಿತಾಯ ಮಾಡಿದ್ದಾರೆ.
ಕಸದ ತೊಟ್ಟಿಯಂತಾಗಿದ್ದ 2ನೇ ಗ್ರಾಮೀಣ ಘಟಕವನ್ನು ಸುಂದರ ಹಾಗೂ ಪರಿಸರಸ್ನೇಹಿ ಘಟಕವಾಗಿ ಮೈದಳೆದಿದೆ. ಕೆಲ ಸಿಬ್ಬಂದಿ ಸ್ವಂತ ಖರ್ಚಿನಿಂದ ಸಂಸ್ಥೆಗೆ ಯಾವುದೇ ಆರ್ಥಿಕ ಹೊರೆ ಹಾಕದೆ ಇಡೀ ಘಟಕದ ಹಸಿರೀಕರಣದ ಕಾರ್ಯ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಗ್ರಾಮೀಣ ವಿಭಾಗದ ವ್ಯಾಪ್ತಿಯ ವಿಭಾಗೀಯ ಕಾರ್ಯಾಗಾರ ಸಿಬ್ಬಂದಿಯೂ ತಾವೇೂ ಯಾವುದಕ್ಕೂ ಕಡಿಮೆಯಿಲ್ಲ ಎನ್ನುವಂತೆ ನಿರುಪಯುಕ್ತ ವಸ್ತುಗಳಿಂದ ವಿವಿಧ ಪರಿಕರಗಳನ್ನು ಮಾಡಿದ್ದಾರೆ.
ಬಸ್ ನಿಲ್ದಾಣ, ಘಟಕಗಳು, ವಿಭಾಗೀಯ ಕಚೇರಿಗಳಿಗೆ ಬೇಕಾಗುವ ಕಸದ ತೊಟ್ಟಿ, ಕಸ ಸಾಗಿಸುವ ಟ್ರಾಲಿಗಳನ್ನು ಬೇಡಿಕೆಗೆ ಅನುಗುಣವಾಗಿ ತಯಾರಿಸಿದ್ದಾರೆ. ಸಂಸ್ಥೆ ಖರೀದಿಸುವ ಆಯಿಲ್ ಬ್ಯಾರಲ್ಗಳನ್ನು ಕತ್ತರಿಸಿ ಕಸದ ಡಬ್ಬಿ ಮಾಡಿದ್ದಾರೆ. ಹಾಕಿದ ಕಸವನ್ನು ಕೈ ಹಾಕಿ ತೆಗೆಯುವ ಬದಲು ಅದನ್ನು ಬಾಗಿಸಿ ನೇರವಾಗಿ ಕಸ ಸಾಗಿಸುವ ಟ್ರಾಲಿಗೆ ಹಾಕಿಕೊಳ್ಳುವಂತೆ ತಿರುಗಿಸುವ ವ್ಯವಸ್ಥೆಯೂ ರೆಡಿಯಾಗಿದೆ. ಕಸ ಸಾಗಿಸುವ ಟ್ರಾಲಿಗಳನ್ನು ಬಸ್ ಬಾಡಿ ನಿರ್ಮಾಣಕ್ಕೆ ಬಳಸಿ ಉಳಿದ ನಿರುಪಯುಕ್ತ ವಸ್ತುಗಳಿಂದ ಗಟ್ಟಿಮುಟ್ಟಾಗಿ ಸಿದ್ಧಪಡಿಸಿದ್ದಾರೆ. ಟೇಬಲ್, ಕುರ್ಚಿಗಳೂ ಸಿದ್ಧಗೊಂಡಿವೆ.
ಬಸ್ಸು ದುರಸ್ತಿಗೆ ಅಗತ್ಯವಾದ ಗೋಡಾ, ಅತೀ ಸರಳವಾಗಿ ಟಯರ್ ಎತ್ತುವ ಉಪಕರಣವೂ ಇಲ್ಲಿವೆ. ಇದೇ ರೀತಿ ಪೆಡಲ್ ಆಧಾರಿತ ಸ್ಯಾನಿಟೈಸರ್ ಯಂತ್ರ ತಯಾರಿಸಿ ಎಲ್ಲಾ ಘಟಕ, ವಿಭಾಗೀಯ ಕಚೇರಿಗಳಲ್ಲಿ ಬಳಕೆಯಾಗುತ್ತಿದೆ.
ಕಾರ್ಯಾಗಾರದ ಸಿಬ್ಬಂದಿ ಕಾರ್ಯಕ್ಕೆ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡ ಅಭಿನಂದನೆ ಸಲ್ಲಿಸಿದ್ದಾರೆ.