ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಾನವನ. ಅಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗಾಗಿ ಆಟವಾಡಲು ಪುಟಾಣಿ ರೈಲು ನಿರ್ಮಾಣ ಮಾಡಲಾಗಿದೆ. ಆದ್ರೆ ಮಕ್ಕಳ ರೈಲು ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿದೆ.
ವಾಣಿಜ್ಯನಗರಿ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಮಕ್ಕಳ ಮನರಂಜನೆಗಾಗಿ ಪುಟಾಣಿ ರೈಲು ತಯಾರಿಸಲಾಗಿದೆ. ಆದ್ರೆ ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗಿ ಹೋಗುತ್ತಿದೆ. ಮಕ್ಕಳಿಗೆ ರೈಲಿನ ಅನುಭವ ನೀಡುವ ಮೂಲಕ ಮನರಂಜನೆಗಾಗಿ ನಿರ್ಮಿಸಿರುವ ಪುಟಾಣಿ ರೈಲು ಅವ್ಯವಸ್ಥೆಯ ಆಗರವಾಗಿದೆ. ಸೀಟ್ ಹರಿದು ಹೋಗಿದ್ದು, ಸಂಪೂರ್ಣ ತುಕ್ಕು ಹಿಡಿಯುವ ಸ್ಥಿತಿಯಲ್ಲಿದ್ದರೂ ಕೂಡ ಯಾವುದೇ ರೀತಿ ಕಾಳಜಿ ತೋರುತ್ತಿಲ್ಲ.
ಲಾಕ್ಡೌನ್ ಸಂದರ್ಭದಲ್ಲಿ ಉದ್ಯಾನವನ ಬಾಗಿಲು ಹಾಕಲಾಗಿತ್ತು. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ವ್ಯರ್ಥವಾಗಿದೆ. ನಿರ್ವಹಣೆ ಕೊರತೆಯಿಂದ ಹಾಳಾಗಿ ಹೋಗುತ್ತಿದ್ದು, ಖರ್ಚು ಮಾಡಿದ ಹಣ ಅನಾವಶ್ಯಕವಾಗಿ ಪೋಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದುರಸ್ತಿ ಮಾಡುವ ಮೂಲಕ ಮಕ್ಕಳ ಮನರಂಜನೆಗೆ ಅವಕಾಶ ಕಲ್ಪಿಸಬೇಕಿದೆ.