ಹುಬ್ಬಳ್ಳಿ: ಒಂದು ಕಡೆ ನೌಕರರಿಗೆ ವೇತನ ನೀಡಲು ಆಗದ ಸ್ಥಿತಿ. ಮತ್ತೊಂದು ಕಡೆ ನಿವೃತ್ತ ನೌಕರರಿಗೆ ಕೊಡಲಿಕ್ಕೆ ಪಿಂಚಣಿ ಹಣವೂ ಇಲ್ಲ. ಮಗದೊಂದು ಕಡೆ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಂಸ್ಥೆಯ ನಷ್ಟದಿಂದಾಗಿ ಆಸ್ತಿಗಳನ್ನು ಅಡವಿಡುತ್ತಿರುವ ಸಂಸ್ಥೆ. ಹೀಗೆ ಆರ್ಥಿಕ ಸಂಕಷ್ಟದಿಂದ ಸಾರ್ವಜನಿಕರಿಗೆ ಮತ್ತೊಂದು ಶಾಕ್ ನೀಡಲು ಪ್ರಯತ್ನ ಪಡುತ್ತಿದೆ.
ಓದಿ: ಜೆಡಿಎಸ್ ಸಂಘಟಿಸಲು ಐಕ್ಯತೆಯಿಂದ ಹೋರಾಡಿ: ಹೆಚ್.ಡಿ. ದೇವೇಗೌಡ ಕರೆ
ನಿತ್ಯ ಒಂದೂವರೆ ಕೋಟಿ ರೂ. ನಷ್ಟ ಅನುಭವಿಸುತ್ತಿರುವ ವಾಯವ್ಯ ಸಾರಿಗೆ ಸಂಸ್ಥೆ, ತನ್ನ ಸಿಬ್ಬಂದಿಗೆ ವೇತನ ನೀಡಲು ಆಗದ ಸ್ಥಿತಿಯಲ್ಲಿದೆ. ಈ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಂಸ್ಥೆಯ ಆಸ್ತಿಗಳನ್ನು ಅಡವಿಟ್ಟು ನೂರಾರು ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ.
ಇಷ್ಟಾದರೂ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗದಿದ್ದಾಗ ಈಗ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ವಾಯವ್ಯ ಸಾರಿಗೆ ಮುಂದಾಗಿದೆ. ನಿತ್ಯ ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎನ್ನುತ್ತಿರುವ ಅಧಿಕಾರಿಗಳು, ಟಿಕೆಟ್ ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಕೋವಿಡ್ ಹೊಡೆತಕ್ಕೆ ದಾರಿ ತಪ್ಪಿರುವ ಜನಸಾಮಾನ್ಯರ ಬದುಕು ಇನ್ನೂ ಸರಿ ದಾರಿಗೆ ಬಂದಿಲ್ಲ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮತ್ತೆ ಸಾರಿಗೆ ಇಲಾಖೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಮುಂದಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ವಾಯವ್ಯ ಸಾರಿಗೆ ಟಿಕೆಟ್ ದರ ಹೆಚ್ಚಳ ಮಾಡಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಸ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಸರ್ಕಾರಕ್ಕೆ ಜನರು ಆಗ್ರಹಿಸಿದ್ದಾರೆ.