ಹುಬ್ಬಳ್ಳಿ: ಕೋವಿಡ್ ಬಿಕ್ಕಟ್ಟಿನಲ್ಲಿ ಹಗಲು ರಾತ್ರಿ ಪ್ರಾಣ ಒತ್ತೆ ಇಟ್ಟು ಕಿಮ್ಸ್‌ನ ಶುಶ್ರೂಷಕ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಆದ್ರೆ ಮೊದಲ ಹಾಗೂ ಎರಡನೇ ಅಲೆಯ ವೇಳೆಯ ಪ್ರೋತ್ಸಾಹ ಧನ ಇವರ ಕೈ ಸೇರಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಮೊದಲ ಅಲೆಯ ವೇಳೆ ತಿಂಗಳಿಗೆ 5 ಸಾವಿರ ಹಾಗೂ ಎರಡನೇ ಅಲೆಯಲ್ಲಿ ತಿಂಗಳಿಗೆ 18 ಸಾವಿರದಂತೆ ಆರು ತಿಂಗಳ ಕಾಲ ಪ್ರೋತ್ಸಾಹ ಧನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಸರ್ಕಾರದಿಂದ ಕಿಮ್ಸ್‌ಗೆ ಈವರೆಗೆ ಪ್ರೋತ್ಸಾಹ ಧನದ ಅನುದಾನ ಬಂದಿಲ್ಲ. ಅದರಲ್ಲೂ 2ನೇ ಅಲೆಯಲ್ಲಿ ಪಿಪಿಇ ಕಿಟ್ ಧರಿಸಿ ಸೇವೆ ಸಲ್ಲಿಸಿದವರಿಗೆ ಮಾತ್ರ ಪ್ರೋತ್ಸಾಹ ಧನ ನೀಡುತ್ತೇವೆ ಎಂದಿರುವ ಸರ್ಕಾರದ ಘೋಷಣೆ ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ.
ಕಿಮ್ಸ್‌ನಲ್ಲಿ ವೈದ್ಯಕೀಯ ಸೇವೆಗೆ ನೇಮಕವಾದ 150 ನರ್ಸಿಂಗ್ ಸಿಬ್ಬಂದಿ, ಕಿಮ್ಸ್ ನೇರವಾಗಿ ಗುತ್ತಿಗೆ ಪಡೆದ 18 ಹಾಗೂ ಪಿಎಂಎಸ್‌ಎಸ್‌ವೈ ಅಡಿ 82 ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 39 ಹಾಗೂ ಇತರೆ ಸಿಬ್ಬಂದಿ ಸೇರಿ ಸಮಾರು 370 ಶುಶ್ರೂಷಕ ಸಿಬ್ಬಂದಿ ಕೆಲಸದಲ್ಲಿದ್ದಾರೆ. ಇವರಲ್ಲಿ ಪಿಎಂಎಸ್‌ಎಸ್‌ವೈ ಯೋಜನೆಯ ಸಿಬ್ಬಂದಿಗೆ ಸುಮಾರು 3 ತಿಂಗಳಿನ ಪ್ರೋತ್ಸಾಹ ಧನ ದೊರೆತಿದ್ದು, ಉಳಿದವರಿಗೆ ಸಿಕ್ಕಿಲ್ಲ. ಇದು ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.
ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಈ ಸಿಬ್ಬಂದಿಗೆ ಸರ್ಕಾರ ಸಹಾಯದ ಹಸ್ತ ಚಾಚಬೇಕಿದೆ.