ಹುಬ್ಬಳ್ಳಿ : ಕೆಎಲ್ಇ ಸಂಸ್ಥೆಗೆ ಮೂರುಸಾವಿರ ಮಠದ ಆಸ್ತಿ ದಾನದ ಹಿಂದೆ ಹಣದ ವ್ಯವಹಾರ ನಡೆದಿದೆ ಎಂಬ ದಿಂಗಾಲೇಶ್ವರ ಶ್ರೀಗಳ ಆರೋಪದ ಬಗ್ಗೆ ನಮಗೆ ಮಾಹಿತಿ ಇಲ್ಲ, ಇದ್ದವರು ದಾಖಲೆ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ದಿಂಗಾಲೇಶ್ವರ ಶ್ರೀಗಳಿಗೆ ಸವಾಲು ಹಾಕಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಠದ ಆಸ್ತಿ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಮೂರುಸಾವಿರ ಮಠದ ಆಸ್ತಿ ಬಗ್ಗೆ ಸ್ವಾಮೀಜಿಗಳ ಜೊತೆ ಮಾತನಾಡಿದ್ದೇನೆ. ಮಠದಲ್ಲಿ ಏನೇನಾಗಿದೆ ಅದರ ಮಾಹಿತಿ ತೆಗೆದುಕೊಳ್ಳಲು ಹೇಳಿದ್ದೇನೆ. ಅಲ್ಲದೆ ಜಗದೀಶ್ ಶೆಟ್ಟರ್ ಅವರ ಜೊತೆಯೂ ಮಾತನಾಡಿದ್ದೇನೆ. ಮಠದ ಎಲ್ಲಾ ಮಾಹಿತಿ ತೆಗೆದುಕೊಂಡು ಸಭೆ ಕರೆಯಿರಿ ಎಂದಿದ್ದೇನೆ. ಉನ್ನತ ಸಮಿತಿ ಸಭೆ ನಡೆಸಿ ಅದರ ಚರ್ಚೆ ಮಾಡಬೇಕಿದೆ. ಮಠದ ವಿವಾದದ ಬಗ್ಗೆ ಸಾರ್ವಜನಿಕರಿಗೆ, ಭಕ್ತರಿಗೆ ಮಾಹಿತಿ ನೀಡುವುದು ಅವಶ್ಯಕವಿದೆ ಎಂದರು.
ಓದಿ: ನಾನೂ ಕೂಡ ಸಭಾಪತಿ ಸ್ಥಾನದ ಆಕಾಂಕ್ಷಿ: ಬಸವರಾಜ್ ಹೊರಟ್ಟಿ
ಕೆಎಲ್ಇಗೆ ಮಠದ ಆಸ್ತಿ ನೀಡಿದ್ದು ಸ್ವಾಮೀಜಿಗಳ ವೈಯಕ್ತಿಕ ವಿಚಾರ ಅಲ್ಲ. ಅದಕ್ಕೆ ಎಲ್ಲರ ಸಹಮತವಿದೆ. ಆಗ ಸಿಎಂ ಉದಾಸಿ ಮಂತ್ರಿ ಇದ್ದರು. ಎಲ್ಲಾ ಪಕ್ಷದವರು ಸೇರಿ ಒಪ್ಪಿಗೆ ನೀಡಿ ಆಗಿದ್ದು, ಅದು ಸರಿಯೋ, ತಪ್ಪೋ ಅನ್ನೋದು ಕಾನೂನು ಪ್ರಕಾರ ನೋಡಬೇಕಿದೆ. ತಪ್ಪು ಇದ್ದರೆ ಸರಿಪಡಿಸುವ ಕೆಲಸ ಆಗಬೇಕು. ಉನ್ನತ ಸಭೆಯನ್ನು ಅಧ್ಯಕ್ಷರು ಕರೆಯಬೇಕಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವುದು ಸ್ವಾಮೀಜಿಗಳ ಹಾಗೂ ನಮ್ಮ ಕರ್ತವ್ಯ. ಸೊಸೈಟಿಗೆ ಜಮೀನು ದಾನ ನೀಡಿದ್ದು ತಪ್ಪೇನಿಲ್ಲ ಎಂದರು.