ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣ ಮಾಡಿದ ಮಹಿಳೆಯರ ಸಂಖ್ಯೆ ಎರಡು ಕೋಟಿಯ ಗಡಿ ತಲುಪಿದೆ. ಪ್ರಯಾಣದ ಟಿಕೆಟ್ ಮೌಲ್ಯ 50 ಕೋಟಿ ರೂಪಾಯಿ ದಾಟಿದೆ.
ಯೋಜನೆ ಜಾರಿಯಾಗಿ 16 ದಿನ ಕಳೆದಿದ್ದು ಮಹಿಳಾ ಪ್ರಯಾಣಿಕರು ಭರ್ಜರಿ ಸಂಚಾರ ನಡೆಸುತ್ತಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಜೂನ್ 26 ರಂದು 14,85,663 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 3,94,56,890 ಗಳಾಗಿದೆ. ಶಕ್ತಿ ಯೋಜನೆಯ ಆರಂಭದ ದಿನ ಜೂ.11ರಿಂದ ಜೂ.26 ರ ವರೆಗೆ ಒಟ್ಟು 1,99,55,040 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೌಲ್ಯ ರೂ. 50,70,47,176 ಗಳಾಗಿದೆ.
ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಹೆಚ್ಚಳದ ಜೊತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರೊಂದಿಗೆ ಒಟ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಶಕ್ತಿ ಯೋಜನೆಯ ಜಾರಿಯ ಹಿಂದಿನ ಸೋಮವಾರ ಜೂನ್ 5 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಬಸ್ಸುಗಳಲ್ಲಿ ಒಟ್ಟು 16,79,067 ಪ್ರಯಾಣಿಕರು ಸಂಚಾರ ಮಾಡಿದ್ದರು. ಜೂನ್ 26 ರ ಸೋಮವಾರ 14,85,663 ಮಹಿಳೆಯರು ಹಾಗೂ 11,08,905 ಪುರುಷರು ಸೇರಿದಂತೆ ಒಟ್ಟು 25,94,568 ಜನರು ಪ್ರಯಾಣ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೀಕೆಂಡ್ನಲ್ಲಿ ಮಹಿಳೆಯರ ಭರ್ಜರಿ ಪ್ರಯಾಣ: ಇನ್ನು ಕಳೆದ ಶನಿವಾರ 58,14,524 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಪ್ರಯಾಣ ಬೆಳೆಸಿದ್ದರು. ಮಹಿಳೆಯರಿಗಾಗಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಎರಡು ವಾರದ ಬಳಿಕವೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಯೋಜನೆ ಜಾರಿಯಾಗಿ ಎರಡು ವಾರದ ಬಳಿಕವೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ವೀಕೆಂಡ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಪುಣ್ಯ ಕ್ಷೇತ್ರಗಳತ್ತ ಪಯಣ ಮುಂದುವರಿಸಿದ್ದರು.
ಶನಿವಾರ ಬಹುತೇಕ ಎಲ್ಲಾ ಸರ್ಕಾರಿ ಬಸ್ಗಳು ಅದರಲ್ಲೂ ಧರ್ಮಸ್ಥಳ, ಚಾಂಮುಂಡೇಶ್ವರಿ ದೇವಾಲಯ ಸೇರಿ ರಾಜ್ಯದ ಪ್ರಸಿದ್ಧ ದೇವಾಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಶನಿವಾರ ಬೆಳಗ್ಗೆಯಿಂದ ಮಧ್ಯ ರಾತ್ರಿವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಬರೋಬ್ಬರಿ 58,14,524 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದರು. ಮಹಿಳೆಯರ ಉಚಿತ ಟಿಕೆಟ್ ಮೌಲ್ಯ ಒಟ್ಟು 13.41 ಕೋಟಿ ರೂ. ಆಗಿದೆ. ಶನಿವಾರ ಕೆಎಸ್ಆರ್ಟಿಸಿ ಬಸ್ನಲ್ಲಿ 17,29,314, ಬಿಎಂಟಿಸಿಯಲ್ಲಿ 18,95,144 ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ನಲ್ಲಿ 14,01,910 ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ 7,88,156 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದರು.
ಇದನ್ನೂ ಓದಿ: ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ; 2.84 ಕೋಟಿ ರೂ. ಹಣ ಸಂಗ್ರಹ