ಹುಬ್ಬಳ್ಳಿ : ಕಲಘಟಗಿ ತಾಲೂಕಿನ ಬೆಲವಂತರ ಮತ್ತು ಬಮ್ಮಿಗಟ್ಟಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಭರದಿಂದ ಸಾಗಿವೆ. ಬೆಲವಂತರ ಗ್ರಾಮದ ಗೊಳಿಮರಿ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಸುಮಾರು 3,45,000 ರೂ. ವೆಚ್ಚ ಹಾಗೂ ಬಮ್ಮಿಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾಜಿನಗರ ತಾಂಡಾದ ಮಂಡರ ಕೆರೆ ಹೂಳೆತ್ತುವ ಕಾಮಗಾರಿಯನ್ನು 2,50,000 ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಎರಡೂ ಕಾಮಗಾರಿಗಳಲ್ಲಿ ನೂರಾರು ಜನರಿಗೆ ಉದ್ಯೋಗ ದೊರೆತಿದೆ.
ಕೆಲಸದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಾಯಕ ಮಿತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಮತ್ತು ಕೋವಿಡ್ -19 ರ ತಡೆಗೆ ಪಂಚ ಸೂತ್ರಗಳ ಬಗ್ಗೆ ಕೂಲಿ ಕಾರ್ಮಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಈ ಸಂಕಷ್ಟದ ದಿನಗಳಲ್ಲಿ ಮಹಾತ್ಮ ಗಾಂಧಿ ನರೆಗಾ ಯೋಜನೆಗಳ ಮೂಲಕ ಉದ್ಯೋಗ ಒದಗಿಸುತ್ತಿರುವುದು. ಗ್ರಾಮಸ್ಥರು ಹಾಗೂ ತಾಂಡಾದ ಜನರಲ್ಲಿ ಸಂತಸ ಮೂಡಿಸಿದೆ.
ಕುಂದಗೋಳ ತಾಲೂಕಿನ ತಲರ್ಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಸುಸಾಬ್ ಬೆಡಿಗೇರಿ ಇವರ ಜಮೀನಿನಲ್ಲಿ 20 ಸಾವಿರ ರೂ. ವೆಚ್ಚದಲ್ಲಿ ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಬದು ನಿರ್ಮಿಸಿದ ಕೂಡಲೇ ಮಳೆ ಬಂದು ಹೊಲದಲ್ಲಿ ನೀರು ಸಂಗ್ರಹವಾಗಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.