ಹುಬ್ಬಳ್ಳಿ: ಹುಬ್ಬಳ್ಳಿ ಮೂಲದ ಬೆಂಗಳೂರು ನಿವಾಸಿ ನಂದಿನಿ ಚಂದ್ರಶೇಖರ್ ಅವರು ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ನಿನ್ನೆ ಚೆನ್ನೈ ನಗರದಲ್ಲಿ ನಡೆದ ಮಿಸಸ್ ಇಂಡಿಯಾ 7ನೇ ಆವೃತ್ತಿಯ 2019-20ರ ಸ್ಪರ್ಧೆಯಲ್ಲಿ ಮಿಸಸ್ ಗ್ಲಾಮರಸ್ ದಿವಾ-2019 ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಿಸಸ್ ಇಂಡಿಯಾ ಪೇಜೆಂಟ್ ಪ್ರೈವೇಟ್ ಲಿಮಿಟೆಡ್ನ ದೀಪಾಲಿ ಫಡ್ನೀಸ್ ಅವರು ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಂದಿನಿ ಅವರು ಎಂಬಿಎ ಪದವೀಧರೆ ಆಗಿದ್ದು, ಇದೇ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ ಗ್ಲಾಮರಸ್ ದಿವಾ ಕಿರೀಟವನ್ನು ಅಲಂಕರಿಸಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು ಪ್ರತಿಷ್ಠಿತ ಎನ್ಜಿಒ ಕಂಪನಿಗಳ ರಾಯಭಾರಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ.
ಮ್ಯೂಸಿಕ್, ನೃತ್ಯ, ಕಥೆ, ಕಾದಂಬರಿ, ಕುಕ್ಕಿಂಗ್ನಂತಹ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದು, ಇವರ ಎಲ್ಲ ಕಾರ್ಯ ಕೆಲಸಗಳಿಗೆ ಇವರ ಪತಿ ಚಂದ್ರಶೇಖರಗೌಡ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಹಿಂದೆ ಅವರು ಬೆಂಗಳೂರಿನಲ್ಲಿ ನಡೆದ ಮಿಸಸ್ ಕರ್ನಾಟಕ-2019ರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಿಯೇಟಿವ್ ಕ್ವೀನ್ ಆಗಿ ಹೊರಹೊಮ್ಮಿದ್ದರು.