ಹುಬ್ಬಳ್ಳಿ : ಮುಂಬರುವ ವಿಧಾನಸಭಾ ಚುನಾವಣೆಗೆ ಕುಂದಗೋಳ ಕ್ಷೇತ್ರದಲ್ಲಿ ಶಿವಳ್ಳಿ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು. ಇಲ್ಲದೇ ಹೋದಲ್ಲಿ ಬಂಡಾಯ ಅಭ್ಯರ್ಥಿಯಾಗುವುದು ಅನಿವಾರ್ಯ ಎಂದು ಕಾಂಗ್ರೆಸ್ ಮುಖಂಡ ಮುತ್ತಣ್ಣ ಶಿವಳ್ಳಿ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಕ್ಷೇತ್ರದಲ್ಲಿ ಶಿವಳ್ಳಿ ಮನೆತನ ಕಳೆದ 37 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬರುತ್ತಿದೆ.
ಮಾಜಿ ಸಚಿವ ದಿ.ಸಿ.ಎಸ್.ಶಿವಳ್ಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕ್ಷೇತ್ರದ ಪ್ರತಿಯೊಬ್ಬ ಮತದಾರನೊಂದಿಗೆ ಶಿವಳ್ಳಿ ಕುಟುಂಬ ಸಂಪರ್ಕ ಹೊಂದಿದೆ. ಜನರ ನೋವು-ನಲಿವುಗೆ ಸ್ಪಂದಿಸಿದೆ. ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆಯನ್ನಾಗಿ ಪರಿವರ್ತನೆ ಮಾಡಿದ್ದು ಶಿವಳ್ಳಿ ಕುಟುಂಬ. ಹೀಗಾಗಿ ಕಾಂಗ್ರೆಸ್ ಬಾವುಟವನ್ನು ಮತ್ತೊಮ್ಮೆ ಹಾರಿಸಲು ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂದು ಅವರು ಒತ್ತಾಯಿಸಿದರು.
ಮಾಜಿ ಸಚಿವ ದಿ.ಸಿ.ಎಸ್.ಶಿವಳ್ಳಿ ನಿಧನದ ಬೆನ್ನಲ್ಲೇ ನಡೆದ ಉಪ ಚುನಾವಣೆಯಲ್ಲಿ ನಮ್ಮ ಅತ್ತಿಗೆಗೆ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿದ್ದೆ. ಅದರಂತೆ ಎಲ್ಲ ನಾಯಕರು ಸಹಕಾರ ಕೊಟ್ಟು ಪಕ್ಷ ಗೆಲ್ಲಿಸಿದರು. ಇದೀಗ ನಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯ. ಶಿವಳ್ಳಿ ಕುಟುಂಬದಿಂದ ಪುರುಷ ಅಭ್ಯರ್ಥಿ ನಿಂತಲ್ಲಿ ಉತ್ತಮ ಎಂಬ ಅಭಿಪ್ರಾಯ ಜನರಿಂದ ಬಂದಿದೆ. ಹೀಗಾಗಿ ನಾನು ಕೂಡಾ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮುತ್ತಣ್ಣ ಶಿವಳ್ಳಿ ಹೇಳಿದರು.
ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಒಬ್ಬ ಹೆಣ್ಣು ಮಗಳಾಗಿ ತಮ್ಮ ಕೈಲಾದ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಈ ಕಾರ್ಯವನ್ನು ಮತ್ತಷ್ಟು ವೇಗವಾಗಿ ನಡೆಸಲು ನಾನು ಸ್ಪರ್ಧೆ ಮಾಡುತ್ತಿದ್ದು, ಹೈಕಮಾಂಡ್ ಪರಿಗಣನೆಗೆ ತೆಗೆದುಕೊಂಡು ಟಿಕೆಟ್ ನೀಡುವ ಭರವಸೆ ಇದೆ ಎಂದು ಹೇಳಿದರು.
ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ- ಶಿವಾನಂದ ಕರಿಗಾರ: ಕಾಂಗ್ರೆಸ್ ಪಕ್ಷದ ನಡೆಯಿಂದಾಗಿ ಬೇಸತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ ಕರಿಗಾರ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ನಾನು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೆ, ಈ ಬಾರಿ ನನಗೆ ಟಿಕೆಟ್ ನೀಡುತ್ತೇನೆ ಎಂದು ಭರವಸೆ ನೀಡಿದ್ದರೂ ಸಹಾ ಟಿಕೆಟ್ ನೀಡಲು ಪಕ್ಷದ ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದರು.
ಒಂದು ವೇಳೆ ನನಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ನಾನು ಏಪ್ರಿಲ್ 13 ರಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ. ಈ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಗೆ ಎರಡು ಬಾರಿ ಆಯ್ಕೆಯಾಗಿದ್ದೆ. ಹೀಗಾಗಿ ಈ ನಿರ್ಣಯ ಕೈಗೊಂಡಿದ್ದೇನೆ. ಟಿಕೆಟ್ ರೇಸ್‌ನಲ್ಲಿ ಎನ್.ಎಚ್. ಕೋನರಡ್ಡಿ ಹಾಗೂ ವಿನೋದ ಅಸೂಟಿ ಅವರ ಹೆಸರು ಹೈಕಮಾಂಡ್ ಮಟ್ಟದಲ್ಲಿ ಕೇಳಿ ಬರುತ್ತಿದೆ. ನನ್ನನ್ನು ಪಕ್ಷದವರು ನಿರ್ಲಕ್ಷಿಸಿದ್ದಾರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ: ಮಾಜಿ ಎಂಎಲ್ಸಿ ನಾಗರಾಜ್ ಛಬ್ಬಿ ಮನವೊಲಿಕೆಗೆ ಪ್ರಯತ್ನ ಮಾಡುತ್ತೇನೆ: ಸಂತೋಷ ಲಾಡ್