ಧಾರವಾಡ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಮ್ಮನೆ ಇರಬೇಕು. ಯತ್ನಾಳ್ ಧಾರವಾಡಕ್ಕೆ ಬಂದು ಮಾತನಾಡಲಿ ಎಂದು ಶಾಸಕ ಯತ್ನಾಳ್ಗೆ ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ ಸವಾಲ್ ಹಾಕಿದ್ದಾರೆ.
ಹಿಜಾಬ್ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಹಿಂದೆ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದಿದ್ದರು. ತ್ರಿಬಲ್ ತಲಾಖ್ ಬ್ಯಾನ್ ಮಾಡಿದಾಗ ಬಹಳ ಹೇಳಿಕೊಂಡಿದ್ದರು. ಆಗ ಇದೇ ಹಿಜಾಬ್ ಧರಿಸಿದ ಮಹಿಳೆಯರನ್ನು ಕರೆದುಕೊಂಡು ಸಿಹಿ ಹಂಚಿದ್ದರು, ಹಿಂದಿನ ವಿಡಿಯೋ ಬೇಕಾದರೆ ತೆಗೆದು ನೋಡಿ ಎಂದು ಹರಿಹಾಯ್ದರು.
ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇವೆ ಎಂದೆಲ್ಲ ಹೇಳಿದ್ದರು. ಆದರೆ, ಈಗ ಮುಸ್ಲಿಂ ಮಹಿಳೆಯರ ಬಗ್ಗೆ ಚಿಂತನೆ ಇಲ್ಲವೇ ತ್ರಿಬಲ್ ತಲಾಖ್ ಬಗ್ಗೆ ಜಗತ್ತಿನೊಳಗೆ ಪ್ರಚಾರ ಮಾಡಿದ್ರಿ, ಮುಸ್ಲಿಂ ಮಹಿಳೆಯರ ಹಿಜಾಬ್ ಪರ ಬಿಲ್ ಮಾಡಬಹುದಲ್ವಾ? ಬಿಜೆಪಿಯ ಕೆಲ ಮುಖಂಡರು ಅಗೌರವದಿಂದ ಮಾತನಾಡುವುದು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಬರಿ ಮಸೀದಿ ತೀರ್ಪು ಬಂದಾಗಲೂ ಗಲಾಟೆ ಮಾಡಿಲ್ಲ, ನ್ಯಾಯಾಲಯದ ತೀರ್ಪು ಪಾಲನೆ ಮಾಡಿದ್ದೇವೆ. ಹಿಜಾಬ್ ವಿಷಯದಲ್ಲಿಯೂ ನ್ಯಾಯಾಲಯದ ತೀರ್ಪು ಪಾಲನೆ ಮಾಡುತ್ತೇವೆ. ಆದರೆ ಅವಹೇಳನಕಾರಿ ಮಾತನಾಡಿ ತಾಳ್ಮೆ ತಡೆಯಬೇಡಿ ಎಂದರು.
ಯತ್ನಾಳ್ ಮಾತನಾಡುವುದಾದರೆ ಧಾರವಾಡಕ್ಕೆ ಬಂದು ಮಾತನಾಡಲಿ, ನಾವೇನು ಅಂತಾ ತೋರಿಸುತ್ತೇವೆ ಎಂದು ಶಾಸಕ ಯತ್ನಾಳ್ಗೆ ಇಸ್ಮಾಯಿಲ್ ತಮಟಗಾರ ಸವಾಲ್ ಹಾಕಿದರು.