ಹುಬ್ಬಳ್ಳಿ : ಗೂಳಿಹಟ್ಟಿ ಶೇಖರ್ ಅವರಿಗೆ ಆದ ಅನುಭವಗಳು ನನಗೂ ಆಗಿವೆ. ಆದ್ರೆ ಅಲ್ಲಿ ಆ ಜಾತಿ, ಈ ಜಾತಿ ಅಂತಾ ಹೇಳಲ್ಲ. ಹಾಗೇನಾದ್ರು ಹೇಳಿದ್ರೆ ಅದು ಖಂಡನೀಯವಾದದ್ದು ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಶೂದ್ರರು ಮತ್ತು ದಲಿತರಿಗೆ ಕೆಬಿ ಹೆಡ್ಗೇವಾರ್ ಮ್ಯೂಸಿಯಂಗೆ ಪ್ರವೇಶ ಇಲ್ಲ ಎಂಬ ಗೂಳಿಹಟ್ಟಿ ಶೇಖರ್ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಈ ರೀತಿಯ ಅನುಭವಗಳು ನನಗೂ ಆಗಿದೆ. ಎಷ್ಟೋ ಕಡೆ ಆರ್ಎಸ್ಎಸ್ ಆಫೀಸ್ಗೆ ಹೋಗಬೇಕಾದ್ರೆ ಅವರು ಇಂತಿಂಥವರೇ ಬರಬೇಕು ಎಂದು ಹೇಳುತ್ತಾರೆ. ಆದ್ರೆ ಇದೇ ಜಾತಿಯವರು ಬನ್ನಿ ಎಂದು ಹೇಳಲ್ಲ. ನಾನೂ ಆ ಪಕ್ಷದಲ್ಲಿ ಇದ್ದು ಬಂದವನು. ಕೆಲವೊಂದಿಷ್ಟು ವಿಷಯಗಳಲ್ಲಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಕೆಲವೊಂದು ಕಡೆ ನಮಗೆ ಆಹ್ವಾನವೂ ಇರುತ್ತಿರಲಿಲ್ಲ. ಆದರೆ ನಿಖರವಾಗಿ ಇದಕೋಸ್ಕರ ನಿಮ್ಮನ್ನು ಆಚೆ ಇಟ್ಟಿದ್ದೇವೆ ಎಂದು ಯಾವತ್ತೂ ಹೇಳಿಲ್ಲ ಎಂದರು.
ಮೋದಿಯವರು ಪರಿವಾರ ರಾಜಕಾರಣಕ್ಕೆ ನನ್ನ ಸಮ್ಮತಿ ಇಲ್ಲ ಅಂತಾರೆ. ಆದ್ರೆ ಯಡಿಯೂರಪ್ಪನವರು ರಾಷ್ಟ್ರೀಯ ಕಾರ್ಯಕಾರಣಿಯಲ್ಲಿದ್ದಾರೆ. ಅವರ ಓರ್ವ ಪುತ್ರ ಸಂಸದ, ಮತ್ತೋರ್ವ ಮಗ ರಾಜ್ಯಾಧ್ಯಕ್ಷರಾಗಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್‌ದ್ದು ಕೂಡ ಇದೇ ಪರಿಸ್ಥಿತಿ. ದೇವೇಗೌಡ್ರ ಕುಟುಂಬವನ್ನು ನೋಡಿದ್ರೆ ಇದೆಲ್ಲ ಅರ್ಥವಾಗುತ್ತದೆ ಎಂದು ಬಿಜೆಪಿಯ ಕುಟುಂಬ ರಾಜಕಾರಣವನ್ನು ಮುಖ್ಯಮಂತ್ರಿ ಚಂದ್ರು ಟೀಕಿಸಿದರು.
ಕಾರಿಗೆ ಅಪಘಾತವೆಸಗಿದ ಬೈಕ್ ಸವಾರನ ಜೊತೆ ಭವಾನಿ ರೇವಣ್ಣ ಆ ರೀತಿ ವರ್ತಿಸಿದ್ದು ಅಲ್ಲ. ಇದನ್ನು ದೇವೇಗೌಡ್ರು ಖಂಡಿಸಬೇಕಿತ್ತು. ಶಾಸಕ ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಬೇಕಿತ್ತು. ಭವಾನಿ ರೇವಣ್ಣ ಯಾವುದೇ ಚುನಾವಣೆ ಸ್ಪರ್ಧೆ ಮಾಡದಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಭ್ರಷ್ಟಾಚಾರದಿಂದ ಕೂಡಿವೆ. ಈ ಮೂರು ಪಕ್ಷಗಳು ಜನರನ್ನ ಲೂಟಿ ಮಾಡಿವೆ. ಇದಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದ ವಾಸನೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯ ತನಿಖೆ ನಡೆಸುವುದರ ಜೊತೆಗೆ ಶ್ವೇತ ಪತ್ರ ಹೊರಡಿಸಬೇಕು ಎಂದರು.
ದೇಶದೆಲ್ಲೆಡೆ ಜಾತಿಗಣತಿ ನಡೆಯಲಿ : ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯ ದೊರೆಯಲು ದೇಶದೆಲ್ಲೆಡೆ ಜಾತಿಗಣತಿ ನಡೆಸಬೇಕು. ಸರ್ವರಿಗೂ ಸಕಲ ಸೌಲಭ್ಯ ಸಿಗಲು ಜಾತಿಗಣತಿ ಅವಶ್ಯ. ರಾಜ್ಯದಲ್ಲಿ ನಡೆದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿ, ಸದನದ ಮುಂದಿಡಬೇಕು ಎಂದು ಒತ್ತಾಯಿಸಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಒಗ್ಗಟ್ಟು ಪ್ರದರ್ಶಿಸಬೇಕಿತ್ತು. ಒಗ್ಗಟ್ಟು ಮೂಡದ ಕಾರಣ ಭಾರಿ ಹಿನ್ನಡೆ ಅನುಭವಿಸುವಂತಾಯಿತು. ಲೋಕಸಭೆ ಚುನಾವಣೆಯ ದೃಷ್ಟಿಯಿಂದಾದರೂ ನಾಯಕತ್ವ ಘೋಷಿಸಿ, ಬಿಜೆಪಿಯನ್ನು ಎದುರಿಸಬೇಕು ಎಂದು ಆಪ್ ರಾಜ್ಯಾಧ್ಯಕ್ಷರು ತಿಳಿಸಿದರು.
ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಪರಿಹಾರವಾಗಿ ಪರ್ಯಾಯ ರಾಜಕೀಯ ವ್ಯವಸ್ಥೆ ಅಗತ್ಯವಿದೆ. ಆಮ್ ಆದ್ಮಿ ಪಕ್ಷದಿಂದ ಈ ಬಗ್ಗೆ ಜಾಗೃತಿ ಮೂಡಿಸಲು, ಗ್ರಾಮ ಮಟ್ಟದಲ್ಲಿ ಜನರೊಂದಿಗೆ ಸಮಾಲೋಚನೆ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಮ್ಯೂಸಿಯಂ ಪ್ರವೇಶ ನಿರಾಕರಣೆ ಕುರಿತು ಗೂಳಿಹಟ್ಟಿ ಹೇಳಿಕೆ: ಆರ್ಎಸ್ಎಸ್ಗೆ ಸಚಿವ ಖರ್ಗೆ ಸವಾಲು