ಧಾರವಾಡ : ಲಿಂಗಾಯತ ಪಂಚಮಸಾಲಿ ಸಮಾಜದ ಸಂಘಟನೆ ಆರಂಭವಾಗಿ 20 ವರ್ಷ ಆಗಿವೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಈ ಸಂಘಟನೆ ಆರಂಭಿಸಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ವೀರಪ್ಪ ಮೊಯ್ಲಿಯಿಂದ ಯಡಿಯೂರಪ್ಪನವರವರೆಗೆ ಮನವಿ ಮಾಡಿಕೊಂಡಿದ್ದೇವೆ. ಇವರಿಗೆಲ್ಲ ಮನವಿ ನೀಡಿ, ಶಾಲು ಹಾಕಿ ಸನ್ಮಾನ ಮಾಡಿ ವಿನಂತಿ ಮಾಡಿದ್ದೆಲ್ಲ ಸಾಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ 8 ಜನ ಲಿಂಗಾಯತ ಸಿಎಂ ರಾಜ್ಯವಾಳಿದ್ದಾರೆ. ಆದರೆ, ರಾಜಕೀಯ ಏಳಿಗೆಗೆ ಮಾತ್ರ ಲಿಂಗಾಯತ ಸಮುದಾಯ ಬಳಕೆಯಾಗಿದೆ. ಈ 8 ಜನ ಸಿಎಂಗಳಿಗೂ ಸುವರ್ಣ ಅವಕಾಶ ಇತ್ತು. ಆದರೆ, ಯಾವ ಸಿಎಂ ಕೂಡ ಲಿಂಗಾಯತ ಸಮಾಜದ ಬೇಡಿಕೆ ಈಡೇರಿಸಲಿಲ್ಲ.
ಯಡಿಯೂರಪ್ಪ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಆಗಿ ಬಿಂಬಿಸಿಕೊಂಡಿದ್ದಾರೆ. ಅವರ ಮೇಲೆ ಪಂಚಮಸಾಲಿ ಋಣಭಾರ ಬಹಳ ಇದೆ ಎಂದರು.
ಓದಿ: ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಶೀಘ್ರ ನಿರ್ಧಾರ: ಸಿಎಂ ಭರವಸೆ
ಯಡಿಯೂರಪ್ಪ ಅವಧಿಯಲ್ಲೇ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಬೇಕು. ಆರ್ಎಸ್ಎಸ್ ಸಹ ಇದನ್ನು ಮನವರಿಕೆ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತರ ಪಾತ್ರ ಬಹಳ ಇದೆ.
ಈ ಸತ್ಯ ಆರ್ಎಸ್ಎಸ್ಗೂ ಗೊತ್ತಿದೆ. ಮಹಾರಾಷ್ಟ್ರದಲ್ಲಿ ಸಂಘದ ಸಲಹೆ ಮೇರೆಗೆ ಮರಾಠರಿಗೆ ಶೇ.16ರ ಮೀಸಲಾತಿ ಕೊಟ್ಟಿದ್ದಾರೆ. ಮಹಾರಾಷ್ಟ್ರ ಸಂಘ ಪರಿವಾರದಂತೆ ಕರ್ನಾಟಕ ಸಂಘ ಪರಿವಾರ ನಡೆದುಕೊಳ್ಳಬೇಕು. ಪಂಚಮಸಾಲಿ ಸಮಾಜದ ಹಕ್ಕು ಈಡೇರಿಸಲು ಸಂಘ ಪರಿವಾರ ಸಲಹೆ ನೀಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.