ಹುಬ್ಬಳ್ಳಿ: ಇಂದು ತಾಯಂದಿರ ದಿನದ ಸಂಭ್ರಮ. ಹೆಚ್ಚಿನವರು ತಮ್ಮ ತಾಯಂದಿರ ಕೈಯಲ್ಲಿ ಕೇಕ್ ಕತ್ತರಿಸಿ, ಸಿಹಿ ತಿನಿಸೋ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಆದರೆ ಇಲ್ಲೊಂದು ಯುವಕರ ತಂಡದವರು ವಿಭಿನ್ನವಾಗಿ ತಾಯಂದಿರ ದಿನವನ್ನು ಆಚರಣೆ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದ್ದು ಆಕ್ಸಿಜನ್ ಸಿಗದೆ ಅದೆಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಆದ ಕಾರಣ ಈ ತಂಡ ಮದರ್ಸ್ ಡೇ ಅಂಗವಾಗಿ ಸುಮಾರು 100ಕ್ಕೂ ಹೆಚ್ಚು ತಾಯಂದಿರ ಕೈಯಲ್ಲಿ ಸಸಿಗಳನ್ನು ನೆಡಿಸಿ ತಾಯಂದಿರ ದಿನ ಆಚರಣೆ ಮಾಡಿದ್ದು ವಿಶೇಷವಾಗಿದೆ.
ಟೀಂ ಸ್ಮೈಲ್ ಮತ್ತು ಶಂಕರ ಜ್ಯೋತಿ ನಗರದ ಚಿಕ್ಕ ಮಕ್ಕಳು ಸೇರಿಕೊಂಡು ಸುತಗಟ್ಟಿಯ ಶಂಕರಜ್ಯೋತಿ ನಗರದಲ್ಲಿ ಸಮಸ್ತ ಜನತೆ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿ ಈ ದಿನಕ್ಕೆ ಮೆರಗು ತಂದಿದ್ದಾರೆ. ಟೀಂ ಸ್ಮೈಲ್ ಯುವಕರು ಎಲ್ಲ ತಾಯಂದಿರಿಗೆ ಉಡುಗೊರೆಯಾಗಿ ಸಸಿಗಳನ್ನು ನೀಡಿ ಅವರಿಂದ ಪ್ರತಿಯೊಬ್ಬರ ಮನೆ ಮುಂದೆ ಮತ್ತು ಗಾರ್ಡನ್ಗಳಲ್ಲಿ ಗಿಡಗಳನ್ನು ನೆಡಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದ ಕಣಿವೆಗೆ ಉರುಳಿದ ಜೀಪ್.. ಓರ್ವ ಸಾವು, ಹಲವರಿಗೆ ಗಾಯ
ಕೊರೊನಾ ಸೋಂಕಿನಿಂದ ಆಮ್ಲಜನಕ ಸಿಗದೆ ಸಾವು ನೋವು ಹೆಚ್ಚಾಗುತ್ತಿದ್ದು, ಮುಂದೆ ಇಂತಹ ಸಮಸ್ಯೆ ಎದುರಾಗಬಾರದೆಂಬ ನಿಟ್ಟಿನಲ್ಲಿ ಈ ದಿನದ ನಿಮಿತ್ತ ಯುವಕರ ತಂಡ ಸಸಿಗಳನ್ನು ನೀಡಿ ಈ ಮಹತ್ತರ ಕಾರ್ಯ ಮಾಡಿ ಬೇರೆಯವರಿಗೂ ಮಾದರಿಯಾಗಿದ್ದಾರೆ.