ಹುಬ್ಬಳ್ಳಿ: ನವಜಾತ ಶಿಶುವನ್ನು ಹೊತ್ತುಕೊಂಡು ಊರಿಗೆ ತೆರಳಲಾಗದ ಬಾಣಂತಿ ಹಾಗೂ ಅವರ ಪೋಷಕರಿಗೆ ಪೊಲೀಸರು ಊರಿಗೆ ಹೋಗಲು ಸಹಾಯ ಮಾಡುವ ಮೂಲಕ ಮಾನವೀಯತೆ ತೋರಿರುವ ಘಟನೆ ನಗರದ ಹಳೇ ಬಸ್ ನಿಲ್ದಾಣದ ಎದುರು ನಡೆದಿದೆ.
ಕಿತ್ತೂರಿನ ಮಹಿಳೆಯೊಬ್ಬರು ಹೆರಿಗೆಗೆಂದು ನಗರ ಸಿಟಿ ಕ್ಲಿನಿಕ್ಗೆ ದಾಖಲಾಗಿದ್ದರು. ಈ ಮಹಿಳೆಗೆ ಹೆರಿಗೆಯಾಗಿ ಮೂರು ದಿನವಾದ ನಂತರ ಇಂದು ಕ್ಲಿನಿಕ್ನವರು ಡಿಸ್ಚಾರ್ಜ್ ಮಾಡಿದ್ದಾರೆ. ಲಾಕ್ಡೌನ್ ಆಗಿದ್ದರಿಂದ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಾಳೆ ಡಿಸ್ಚಾರ್ಜ್ ಮಾಡುವಂತೆ ಮಹಿಳೆಯ ತಂದೆ ತಾಯಿ ಕೇಳಿಕೊಂಡಿದ್ದಾರೆ. ಆದ್ರೆ ಆಸ್ಪತ್ರೆಯವರು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ. ದಿಕ್ಕು ತೋಚದೆ ಕಂಗಾಲಾದ ಮಹಿಳೆ ತಂದೆ - ತಾಯಿ, ಬಾಣಂತಿ ಹಾಗೂ ಹಸುಗೂಸನ್ನು ಕರೆದಯಕೊಂಡು ಹೊಸ ಬಸ್ ನಿಲ್ದಾಣ ಎದುರಿನ ಫುಟ್ ಪಾತ್ ಮೇಲೆ ಕುಳಿತಿದ್ದರು.
ಏನು ಮಾಡಬೇಕೆಂದು ತೋಚದೆ ಕುಳಿತಿದ್ದ ಇವರನ್ನು ವಿಚಾರಿಸಿದ ಉತ್ತರ ಸಂಚಾರಿ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿ. ಹೆಚ್. ಮುರಾಳ ಹಾಗೂ ಅವರ ಸಿಬ್ಬಂದಿ ಬೆಳಗಾವಿ ಕಡೆ ಹೊರಟಿದ್ದ ಗ್ಯಾಸ್ ಸಿಲಿಂಡರ್ ಸಾಗಿಸುವ ಲಾರಿಯನ್ನು ತಡೆದು, ಅದರಲ್ಲಿ ಇವರನ್ನು ಹತ್ತಿಸಿ ಕಳುಹಿಸಿ ಕೊಟ್ಟಿದ್ದಾರೆ. ಪೊಲೀಸರ ಈ ಸಹಾಯಕ್ಕೆ ಮಹಿಳೆ ಹಾಗೂ ಅವರ ತಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.