ಹುಬ್ಬಳ್ಳಿ: ಜೆಡಿಎಸ್ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿದರೆ, ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ನಲ್ಲಿ ಒಮ್ಮತದ ಅಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಲ್ಲಿ ನಾನು ಸಭಾಪತಿ ಆಗುವುದು ನಿಶ್ಚಿತ ಎಂದರು.
ಜನವರಿ 18 ರಂದು ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಏಳು ವಿಭಾಗ ರಚಿಸಿ ಸಮಿತಿ ರಚಿಸಲಾಗಿದೆ. ಜೆಡಿಎಸ್ ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿದ್ದು, ಇಂದು ಬೆಳಗಾವಿ ವಿಭಾಗದ ಸಭೆ ನಡೆಸಲಾಗುತ್ತಿದೆ. ನಮ್ಮ ವಿಭಾಗದ ಜವಾಬ್ದಾರಿ ನಿಭಾಯಿಸಲು ನನ್ನನ್ನು ಸಂಚಾಲಕನನ್ನಾಗಿ ನೇಮಿಸಿದ್ದಾರೆ. ಸಾಕಷ್ಟು ಹೊಡೆತಗಳನ್ನ ತಿಂದು ಪಕ್ಷ ಕ್ಷೀಣವಾಗಿದೆ. ಹೀಗಾಗಿ ಪಕ್ಷ ಸಂಘಟನೆ ಮಾಡಿ ಗಟ್ಟಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ: ಮೂವರಿಗೆ ಖಾತೆ ಮರು ಹಂಚಿಕೆ.. ವೈದ್ಯಕೀಯ ಶಿಕ್ಷಣ ಖಾತೆ ಮರಳಿ ಪಡೆದ ಡಾ. ಸುಧಾಕರ್
ಪಕ್ಷ ಸಂಘಟನೆ ಹಿನ್ನೆಲೆ ಇದೇ ಜ.31 ರಂದು ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಬಾರಿ ಪಕ್ಷದಲ್ಲಿ ಶೇ. 45 ಯುವಜನತೆಗೆ ಆದ್ಯತೆ ನೀಡಲಾಗುತ್ತಿದೆ. ಪಕ್ಷವನ್ನು ಬಲಿಷ್ಟವಾಗಿ ಸಂಘಟಿಸಲು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದೇವೆ ಎಂದರು.
ನಾಳೆ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಜೆಡಿಎಸ್ ನಿಂದ ಸಂಪೂರ್ಣ ಬೆಂಬಲವಿದೆ. ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರೈತರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.