ಧಾರವಾಡ: ಸಮಾಜದ ಹಲವು ಮುಖಂಡರ ಜೊತೆ ಚರ್ಚಿಸಿ ಎಸ್ಎಸ್ಎಎಲ್ಸಿ ಪರೀಕ್ಷೆ ತೀರ್ಮಾನಿಸಲಾಗಿದೆ. 8.48 ಲಕ್ಷ ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಪರೀಕ್ಷೆಗೆ ಕುಳಿತುಕೊಳ್ಳುವ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಥರ್ಮಲ್ ಸ್ಕ್ಯಾನ್ ಮಾಡುವಾಗ ಅನಾರೋಗ್ಯ ಕಂಡರೆ ಪ್ರತ್ಯೇಕವಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ. ಇದಕ್ಕಾಗಿ ಪ್ರತಿ ಕೇಂದ್ರದಲ್ಲಿ ಎರಡು ಕೊಠಡಿ ಕಾಯ್ದಿರಿಸಲಿದ್ದೇವೆ. ಎಲ್ಲ ಪರೀಕ್ಷಾ ಕೇಂದ್ರಕ್ಕೆ ಸ್ಯಾನಿಟೈಸರ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ರೆಡ್ ಕ್ರಾಸ್‌ನವರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕಂಟೈನ್ಮೆಂಟ್ ಝೋನ್ನಲ್ಲಿನ ಪರೀಕ್ಷಾ ಕೇಂದ್ರಗಳನ್ನು ಸ್ಥಳಾಂತರಿಸಲಾಗಿದೆ. ಪರೀಕ್ಷೆ ನಡೆದಾಗಲೇ ಕಂಟೈನ್ಮೆಂಟ್ ಝೋನ್ ಆದಲ್ಲಿ ಆ ಭಾಗದ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶದ ಮತ್ತು ಹೊಸ ಅಭ್ಯರ್ಥಿಯಂತೆ ಪ್ರವೇಶ ಪತ್ರ ಕೊಡಲಾಗುವುದು ಎಂದರು.
ವಿದ್ಯಾರ್ಥಿಗಳು ಬಂದು ಹೋಗಲು ಸಾರಿಗೆ ಸಂಸ್ಥೆ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆ ಬಸ್ ಬಳಸಲಿದ್ದೇವೆ. ಪರೀಕ್ಷೆ ಸಂಬಂಧ ಒಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆ ನಡೆಸದೇ ಪಾಸ್ ಮಾಡುವಂತೆ ಅವರು ನ್ಯಾಯಾಲಯಕ್ಕೆ ಹೋಗಿದ್ದರು. ಹೈಕೋರ್ಟ್ ಅದನ್ನೆಲ್ಲ ಪರಿಗಣಿಸಿ ಉತ್ತಮ ಆದೇಶ ನೀಡಿದೆ. ಈ ಮೂಲಕ ಪರೀಕ್ಷೆ ನಡೆಸಲು ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಮಕ್ಕಳ ನೆರವಿಗಾಗಿ ಸಹಾಯವಾಣಿ ಮಾಡುತ್ತಿದ್ದೇವೆ. ಈ ಪರೀಕ್ಷೆ ನಮಗೆ ದೊಡ್ಡ ಸವಾಲು ಶಿಕ್ಷಣ ಇಲಾಖೆಯ ಕ್ಷಮತೆ ತೋರಿಸುವ ದೊಡ್ಡ ಅವಕಾಶ, ಕೇರಳದಲ್ಲಿ ಈಗಾಗಲೇ ಪರೀಕ್ಷೆ ಶುರುವಾಗಿದೆ. ತಮಿಳನಾಡಿನಲ್ಲಿಯೂ ಜೂನ್ 15 ರಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ತರಗತಿಗಳು ಯಾವಾಗ ಪ್ರಾರಂಭ ಎಂದು ಬಹಳ ಜನ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಈ ಸಂಬಂಧ ಪತ್ರ ಬಂದಿದೆ. ಶಾಲೆಗಳನ್ನು ಪ್ರಾರಂಭಿಸುವ ಕುರಿತು ಪೋಷಕರ ಸಭೆ ಕರೆಯಲು ತಿಳಿಸಲಾಗಿದೆ. ಎಲ್ಲ ಶಾಲೆಯಲ್ಲಿ ಸಭೆ ಕರೆದು ಅವರ ಅಭಿಪ್ರಾಯ ಕಳುಹಿಸಬೇಕಿದೆ. ಅಭಿಪ್ರಾಯ ನೋಡಿ ಜುಲೈನಲ್ಲಿ ಕೇಂದ್ರ ತೀರ್ಮಾನ ಕೈಗೊಳ್ಳಲಾಗುವುದು.
ಜೂ. 10, 11, 12 ರಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಪೋಷಕರ, ಎಸ್‌ಡಿಎಂಸಿ ಸಭೆ ನಡೆಯಲಿದೆ. ಸಭೆಯಲ್ಲಿ ಪೋಷಕರ ಅಭಿಪ್ರಾಯ ಸಂಗ್ರಹ ಮಾಡಲು ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ. ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿಯೂ ಪೋಷಕರ ಸಭೆ ನಡೆಯಲಿದೆ. ಎಲ್ಕೆಜಿ, ಯುಕೆಜಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಬಾರದು ಎಂದು ಪೋಷಕರು ಹೇಳುತ್ತಿದ್ದಾರೆ. ಈ ಸಂಬಂಧ ಸಹಿ ಸಂಗ್ರಹ ಅಭಿಯಾನ ನಡೆದಿದೆ ಎಂದರು. ಆನ್‌ಲೈನ್ ಎಜ್ಯುಕೇಷನ್ ಬಗ್ಗೆ ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸುತ್ತೇವೆ. ಪಿಯುಸಿಗೆ ಒಂದೇ ಪೇಪರ್ ಬರೆಯುವವರಿಗೆ ಇದ್ದ ಜಾಗದಲ್ಲೇ ಅವಕಾಶ ಕೊಡುತ್ತೇವೆ ಎಂದರು. ರಜೆಗೆಂದು ಅನೇಕ ಮಕ್ಕಳು ಮನೆಗೆ ಹೋಗಿದ್ದಾರೆ. ವಲಸೆ ಕಾರ್ಮಿಕರ ಮಕ್ಕಳಿಗೆ ತಾವಿರುವ ಜಾಗದಿಂದಲೇ ಪರೀಕ್ಷೆ ಬರೆಯುವ ಅವಕಾಶ ಕೊಟ್ಟಿದ್ದೇವೆ ಎಂದು ಸಚಿವರು ವಿವರಿಸಿದರು.