ಧಾರವಾಡ: ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವ ಜಗದೀಶ ಶೆಟ್ಟರ್ ಭೇಟಿ ಮಾಡಿ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದರು.
ಅಳ್ನಾವರ್ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ಅಳ್ನಾವರ ಪಟ್ಟಣ, ರಾಮಾಪುರ, ಕಲ್ಲಾಪುರ ಹುಲಿಕೆರೆ ಇಂದಿರಮ್ಮನ ಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.
ಪ್ರವಾಹದಲ್ಲಿ ಮನೆ-ಮಠ ಕಳೆದುಕೊಂಡವರಿಗೆ ಸಚಿವರು ಸಾಂತ್ವನ ಹೇಳಿದರು. ಬಳಿಕ ಮನೆ ಬಿದ್ದು ದಾಖಲೆಗಳೆಲ್ಲ ಹಾಳಾದರೂ ಪರಿಹಾರಕ್ಕೆ ಮದುವೆ ದಾಖಲೆಗಳನ್ನು ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ಮುಂದೆ ವೃದ್ದೆಯೊಬ್ಬರು ನೋವು ತೋಡಿಕೊಂಡರು.
ರೈಲ್ವೆ ನಿಲ್ದಾಣದ ಬಳಿ ಹೋಗುತ್ತಿದ್ದ ಶೆಟ್ಟರ್ ಕಾರನ್ನು ಅಡ್ಡಗಟ್ಟಿದ ವೃದ್ದೆ ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿ ಮನವಿ ಸಲ್ಲಿಸಿದರು. ಪ್ರವಾಹದ ಸಂದರ್ಭದಲ್ಲಿ ಮನೆಯೊಳಗೆ ಎಲ್ಲ ದಾಖಲೆ ಸಿಲುಕಿಕೊಂಡಿವೆ. ಯಾವ ದಾಖಲೆಯೂ ಕೈಯಲ್ಲಿ ಇಲ್ಲ, ನನ್ನ ಗಂಡ ಕೂಡ ಸತ್ತು ಒಂದೂವರೆ ವರ್ಷ ಆಯ್ತು, ಈಗ ಮದುವೆ ದಾಖಲೆ ಕೊಟ್ಟರೆ ಮಾತ್ರ ಪರಿಹಾರ ಎನ್ನುತ್ತಿದ್ದಾರೆಂದು ವೃದ್ದೆ ಕಣ್ಣೀರು ಹಾಕಿದ್ದಾರೆ.
ಒಂದು ಟೇಬಲ್‌ದಿಂದ ಮತ್ತೊಂದು ಟೇಬಲ್ ಗೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆಂದು ವೃದ್ಧೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ವೃದ್ದೆ ಸಮಸ್ಯೆಗೆ ಶೀಘ್ರವೇ ಸ್ಪಂದಿಸುವಂತೆ ಸಚಿವ ಜಗದೀಶ ಶೆಟ್ಟರ್ ಸೂಚನೆ ಕೊಟ್ಟರು.