ಹುಬ್ಬಳ್ಳಿ: ಸಚಿವ ಜಿ. ಪರಮೇಶ್ವರ್ ಮುಖ್ಯಮಂತ್ರಿ, ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಆಗಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಾಂದರ್ಭಿಕವಾಗಿ ಹೇಳಿರಬಹುದು. ಆದರೆ ಮುಂದೊಂದು ದಿನ ದಲಿತರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಅದಕ್ಕೆ ಕಾಯಬೇಕಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ಒಳ್ಳೆಯ ದೃಷ್ಟಿಯಿಂದ ಹೇಳಿದ್ದಾರೆ. ಹೇಳಿದ ತಕ್ಷಣ ಯಾವುದು ಆಗೋದಿಲ್ಲ. ಈ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯ ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಚರ್ಚೆ ಅಗತ್ಯವಿಲ್ಲ. ಯಾರೇ ಮುಖ್ಯಮಂತ್ರಿ ಇದ್ದಾಗಲೂ ಈ ತರಹ ಮಾತುಗಳು ಕೇಳಿ ಬರುತ್ತದೆ ಎಂದರು.
ಸಚಿವ ಡಿ.ಸುಧಾಕರ್ ಅವರ ಮೇಲೆ ದಾಖಲಾದ ಎಫ್ಐಆರ್ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಎಲ್ಲರಿಗೂ ಸಮಾನ ಕಾನೂನು ಇದೆ. ಕಾನೂನು ಅಡಿಯಲ್ಲಿ ಕ್ರಮ ಆಗುತ್ತದೆ. ಎಲ್ಲದಕ್ಕೂ ರಾಜೀನಾಮೆ ಕೊಡಬೇಕು ಎಂದೇನಿಲ್ಲ. ಸಮಸ್ಯೆ ಗಂಭೀರತೆ ಮೇಲೆ ರಾಜೀನಾಮೆ ನೀಡಲಾಗುತ್ತದೆ. ಅದರಂತೆ ಸದ್ಯದ ಪ್ರಕರಣ ಗಂಭೀರವಾಗಿದ್ದರೆ ರಾಜೀನಾಮೆ ಕೊಡಬಹುದು ಎಂದರು.
ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯಕ್ಕೆ ಕೇಂದ್ರದಿಂದ ಫಾರೆಸ್ಟ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಅದು ಬಂದ ತಕ್ಷಣ ರಾಜ್ಯ ಸರ್ಕಾರ ಸಮರ್ಥವಾಗಿದ್ದು, ಯೋಜನೆ ಆರಂಭಿಸಲಾಗುವುದು ಎಂದರು. ಇನ್ನು ಬೆಳಗಾವಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಈಗಾಗಲೇ ಕ್ಷೇತ್ರದಲ್ಲಿ ಚರ್ಚೆ ಆರಂಭವಾಗಿದೆ. ಅಂತಿಮವಾಗಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.
ಬಿ.ಕೆ.ಹರಿಪ್ರಸಾದ್ ಹೇಳಿದ್ದೇನು?: ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗೃಹ ಸಚಿವ ಜಿ.ಪರಮೇಶ್ವರ್ ಅವರಂತಹ ದಲಿತ ನಾಯಕರನ್ನು ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಪರಿಗಣಿಸದೇ ಇರುವುದು ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರಂತಹ ಎಸ್‌ಟಿ ಮುಖಂಡರನ್ನು ಪರಿಗಣಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ಹರಿಪ್ರಸಾದ್ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಅವರು ಹಿರಿಯ ನಾಯಕರು. ಪಕ್ಷದ ನಾಯಕರೊಂದಿಗೆ ಮಾತನಾಡಿ ಸಮಸ್ಯೆಗಳಿದ್ದರೆ ಪರಿಹರಿಸುತ್ತಾರೆ" ಎಂದು ಹೇಳಿದ್ದರು.
ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಎಲ್ಲವೂ ಹೈಕಮಾಂಡ್ನಿಂದಲೇ ಆಗುತ್ತದೆ: ಸಚಿವ ಬೋಸರಾಜು
ಹರಿಪ್ರಸಾದ್ಗೆ ಶೋಕಾಸ್ ನೊಟೀಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಗುಡುಗಿದ್ದ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ಗೆ ಎಐಸಿಸಿ ಶೋಕಾಸ್ ನೊಟೀಸ್ ಜಾರಿ ಮಾಡಿದೆ. ಎಐಸಿಸಿ ಶಿಸ್ತು ಸಮಿತಿಯಿಂದ ನೊಟೀಸ್ ಜಾರಿ ಮಾಡಿದ್ದು, ಹತ್ತು ದಿನಗಳೊಳಗೆ ಉತ್ತರಿಸುವಂತೆ ತಿಳಿಸಿದೆ. ಕಳೆದ ಶನಿವಾರ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿಎಂ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದರು. ಇದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ತೀವ್ರ ಮುಜುಗರಕ್ಕೀಡು ಮಾಡಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಎಐಸಿಸಿ ಬಳಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಕೂಡ ಬಿ.ಕೆ.ಹರಿಪ್ರಸಾದ್ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದ ಬಿ ಕೆ ಹರಿಪ್ರಸಾದ್ಗೆ ಶೋಕಾಸ್ ನೊಟೀಸ್