ಧಾರವಾಡ: ಕೊರೊನಾ ಎರಡನೇ ಅಲೆಯಲ್ಲಿ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿದರು. ನಗರದ ಕಮಲಾಪುರದ ಕುಂಬಾರ ಓಣಿಯಲ್ಲಿರುವ ಮಕ್ಕಳ ಮನೆಗೆ ಆಗಮಿಸಿದ ಸಚಿವೆ, ಯೋಗಕ್ಷೇಮ ವಿಚಾರಿಸಿದರು.
ಕೊರೊನಾದಿಂದ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳು ಇದೀಗ ತಾಯಿಯ ತವರು ಮನೆಯಲ್ಲಿ ಆಶ್ರಯ ಪಡೆದುಕೊಂಡಿವೆ. ಈ ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಕೊಡಿಸುವುದಾಗಿ ಸಚಿವೆ ಇದೇ ವೇಳೆ ಕುಟುಂಬಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಚಿವೆಯ ಜೊತೆ ಮಕ್ಕಳು ಮಾತನಾಡಿದರು. ಒಂದು ಮಗು ನಾನು ಡಾಕ್ಟರ್ ಆಗುತ್ತೇನೆ ಎಂದರೆ, ಇನ್ನೋರ್ವ ಹೆಣ್ಣು ಮಗು ನಾನು ಟೀಚರ್ ಆಗುತ್ತೇನೆ ಎಂದಳು. ಈ ವೇಳೆ ಯಾವ ವಿಷಯದ ಬಗ್ಗೆ ಟೀಚರ್ ಆಗುತ್ತೀ? ಎಂದು ಸಚಿವರು ಪ್ರಶ್ನಿಸಿದರು. ಅದಕ್ಕೆ ಅಂಗನವಾಡಿ ಟೀಚರ್ ಅಂತಾ ಬಾಲಕಿ ಉತ್ತರಿಸಿದರು. ಆಗ, ನೀನು ಮಿನಿಸ್ಟರ್ ಆಗು ಎಂದು ಸಚಿವರು ಆಕೆಯ ಬೆನ್ನುತಟ್ಟಿ ಪ್ರೋತ್ಸಾಹಿಸಿದರು.
ಇದನ್ನೂ ಓದಿ: ಬಂಧುಗಳ ಬಲಿ ಪಡೆದ ಕೋವಿಡ್: ಖಿನ್ನತೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಅನಾಥರಾಗಿರುವ ಈ ಮಕ್ಕಳ ತಂದೆ ಮಲ್ಲಪ್ಪ ಗಾರಗೆ ಹಾಗೂ ತಾಯಿ ಕಸ್ತೂರಿ ಗಾರಗೆ ಇಬ್ಬರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಮಕ್ಕಳ ತಾಯಿ ಮೇ 18 ರಂದು ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ನಿಧನ ಹೊಂದಿದರೆ, ತಂದೆ ಜೂನ್ 4 ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.