ಧಾರವಾಡ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ಕೇಸ್ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಈ ರೀತಿಯ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಇದೆ. ಕ್ಯಾಬಿನೆಟ್ ಅಂದರೆ ಸರ್ಕಾರ ಇದ್ದಂತೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಇದೇ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ನಿರ್ಣಯದ ಬಗ್ಗೆ ವಾದ, ವಿವಾದ ಇದ್ದೇ ಇರುತ್ತವೆ. ನಾನು ಸರ್ಕಾರದ ನಿರ್ಧಾರದ ಪರ ನಿಲ್ಲುತ್ತೇನೆ. ಹಿಂದಿನ ಸರ್ಕಾರದ ನಿರ್ಧಾರ ಎನ್ನುವ ಚರ್ಚೆ ಇರಬಹುದು. ಸಿಬಿಐ, ಇಡಿ ತನಿಖೆಗಳಿಂದ ವಿಧಿಸಲಾಗುವ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. ಸರ್ಕಾರ ತೆಗೆದುಕೊಂಡ ನಿರ್ಧಾರ ಅಂತಿಮವಾಗಿ ಕಾನೂನುನಡಿಯಲ್ಲಿ ಮೇಲ್ಮನವಿಗೆ ಹೋದರೆ ಹೋಗಲಿ ಎಂದರು.
ಮುಂದುವರೆದು ಮಾತನಾಡಿ, ಸಚಿವ ಸಂಪುಟ ಸಭೆ ಮೇಲೆ ಡಿಕೆಶಿ ಒತ್ತಡ ಹಾಕಿದ್ದಾರೆಂಬ ವಿಚಾರಕ್ಕೆ, ಸಂಪುಟ ಸಭೆಯಲ್ಲಿ ಒತ್ತಡ ಹಾಕುವಂತಹದ್ದು ಏನಿಲ್ಲ. ಎಲ್ಲರೂ ಸೇರಿಕೊಂಡು ತೆಗೆದುಕೊಂಡಿರುವ ನಿರ್ಧಾರವೇ ಅಂತಿಮ. ಆದರೆ ನಾನು ನಿನ್ನೆಯ ಸಭೆಯಲ್ಲಿ ಇರಲಿಲ್ಲ. ತೆಲಂಗಾಣದಲ್ಲಿ ಪ್ರಚಾರದಲ್ಲಿದ್ದೆ, ಹೀಗಾಗಿ ಸಭೆಯ ನಿರ್ಣಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.
'ನನಗೆ ರೇಷನ್ ಕಾರ್ಡೇ ಇಲ್ಲ'-ಸಚಿವರ ಮುಂದೆ ಅಳಲು: ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಬರ ನಿರ್ವಹಣೆ ಕುರಿತು ಸಭೆ ನಡೆಸಲು ಸಚಿವ ಲಾಡ್ ಆಗಮಿಸಿದ ವೇಳೆ ವ್ಯಕ್ತಿಯೊಬ್ಬರು ಸಚಿವರ ಎದುರು ಅಳಲು ತೋಡಿಕೊಂಡರು. ಅನ್ನಭಾಗ್ಯ ಅನ್ನಭಾಗ್ಯ ಅನ್ನುತ್ತೀರಿ. ಆದರೆ ನನಗೆ ರೇಷನ್ ಕಾರ್ಡೇ ಇಲ್ಲ ಎಂದಿದ್ದು, ಆ ವ್ಯಕ್ತಿ ಕೃಷಿ ವಿವಿ ಗುತ್ತಿಗೆ ಕಾರ್ಮಿಕ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ದರೋಡೆಕೋರರ ರಕ್ಷಣೆ: ಹೆಚ್.ಡಿ.ಕುಮಾರಸ್ವಾಮಿ