ಧಾರವಾಡ: ಕರೆದಿದ್ದು ಬರಗಾಲದ ಸಭೆ. ಆದರೆ, ಇಲ್ಲಿ ನಡೆದಿದ್ದೆ ಬೇರೆ? ಎಂಬ ಗ್ರಾಪಂ ಅಧ್ಯಕ್ಷನ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗರಂ ಆಗಬೇಕಾಯಿತು. ಕೃಷಿ ವಿವಿ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಜಿಲ್ಲೆಯ ಬರ ಸಮರ್ಪಕ ನಿರ್ವಹಣೆ ಬಗ್ಗೆ ಸಭೆ ಕರೆದಿದ್ದರು.
ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ವೇಳೆ ಗ್ರಾಪಂವಾರು ಸಚಿವ ಲಾಡ್ ಮಾಹಿತಿ ಪಡೆಯುತ್ತಿದ್ದರು. ಈ ವೇಳೆ ಬರಗಾಲ ಬಿಟ್ಟು ಬೇರೆ ಬೇರೆ ವಿಷಯಗಳದ್ದೇ ಚರ್ಚೆ ನಡೆಯುತ್ತಿತ್ತು. ಸಭೆಯಲ್ಲಿ ಬಹುತೇಕ ಅಧ್ಯಕ್ಷ, ಉಪಾಧ್ಯಕ್ಷರು ತಮ್ಮದೇ ಸಮಸ್ಯೆಗಳನ್ನು ಹೇಳಿಕೊಂಡರು. ಈ ಬಗ್ಗೆಯೇ ಚರ್ಚೆ ಹೆಚ್ಚಾಗಿದೆ. ಇದರಿಂದ ಸಿಡಿಮಿಡಿಗೊಂಡ ಇನ್ನೋರ್ವ ಗ್ರಾಪಂ ಅಧ್ಯಕ್ಷ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷರೊಬ್ಬರಿಂದ ಆಕ್ಷೇಪ ಬರುತ್ತಿದ್ದಂತೆ, ಕರೆದಿದ್ದು ಬರದ ಸಭೆಗೆ ಆದರೆ, ಇಲ್ಲಿ ನಡೆದಿದ್ದು ಏನು? ನೀವೇನು ಮುಖ ತೋರಿಸಿ ಹೋಗಲು ಬಂದಿರೇನು? ಎಂದು ಗ್ರಾಪಂ ಅಧ್ಯಕ್ಷ ಸಿಟ್ಟಾದರು. ಇವರ ಈ ಮಾತಿಗೆ ಸಚಿವ ಲಾಡ್ ಗರಂ ಆದರು. ಅಧ್ಯಕ್ಷ ಮತ್ತು ಲಾಡ್ ಮಧ್ಯೆ ಮಾತಿನ ಚಕಮಕಿ ನಡೆದ ಬಳಿಕ ಕೊನೆಗೆ ಗ್ರಾಪಂ ಅಧ್ಯಕ್ಷ ಕ್ಷಮೆ ಕೇಳಿ ಕುಳಿತರು.
ಬಳಿಕ ವೇದಿಕೆ ಮೇಲೆ ಮಾತನಾಡಿದ ಸಚಿವ ಲಾಡ್, ಹೊಟ್ಟೆ ಬೆಳೆಸಿಕೊಂಡು ಕುಳಿತರೇ ಆಗದು ಗ್ರಾಮಗಳಿಗೆ ಹೋಗಿ ಎಂದು, ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಕೆಲಸ ಆಗದ ಹಿನ್ನೆಲೆ ತೋಟಗಾರಿಕೆ ಇಲಾಖೆ ಅಧಿಕಾರಿ ಭದ್ರಣ್ಣವರ ಅವರಿಗೆ ಕ್ಲಾಸ್ ತೆಗೆದುಕೊಂಡರು.
ನನಗೆ ರೇಷನ್ ಕಾರ್ಡೇ ಇಲ್ಲ: ಸಚಿವರೆದುರು ಅಳಲು:- ಇನ್ನು ಇದಕ್ಕೂ ಮುನ್ನ ನನಗೆ ರೇಷನ್ ಕಾರ್ಡೇ ಇಲ್ಲ ಎಂದು ವ್ಯಕ್ತಿಯೊಬ್ಬರು ಸಚಿವರ ಮುಂದೆ ಅಳಲು ತೋಡಿಕೊಂಡ ಪ್ರಸಂಗವೂ ನಡೆದಿದೆ. ಸಭೆ ನಡೆಸಲು ಸಚಿವ ಲಾಡ್ ಆಗಮಿಸಿದ ವೇಳೆ ವ್ಯಕ್ತಿಯೊಬ್ಬರು ಸಚಿವರ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಅನ್ನಭಾಗ್ಯ ಅನ್ನಭಾಗ್ಯ ಅನ್ನುತ್ತೀರಿ. ಆದರೆ, ನನಗೆ ರೇಷನ್ ಕಾರ್ಡೇ ಇಲ್ಲ ಎಂದಿದ್ದು, ಆ ವ್ಯಕ್ತಿ ಕೃಷಿ ವಿವಿ ಗುತ್ತಿಗೆ ಕಾರ್ಮಿಕ ಎಂದು ತಿಳಿದು ಬಂದಿದೆ. ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೋಮವಾರ ಬಂದು ಭೇಟಿಯಾಗಿ ಎಂದು ಸಮಾಧಾನ ಮಾಡಿದರು. ಆದರೂ ಸುಮ್ಮನಾಗದ ವ್ಯಕ್ತಿ ಸಚಿವರನ್ನು ಬಿಡದೇ ಮತ್ತೆ ಮತ್ತೆ ರೇಶನ್ ಕಾರ್ಡ್ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸಚಿವರು ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿ ಸಭೆಗೆ ಮುನ್ನಡೆದರು.
ಇದನ್ನೂ ಓದಿ: ಡಿಕೆಶಿ ಪ್ರಕರಣ: ರಾಜ್ಯ ಸರ್ಕಾರಗಳಿಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ- ಸಚಿವ ಸಂತೋಷ್ ಲಾಡ್
ಪ್ರಧಾನಿ ಮೋದಿ ವಿರುದ್ಧ ಲಾಡ್ ವಾಗ್ದಾಳಿ: ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಲಾಡ್, ಪ್ರಧಾನಿ ನರೇಂದ್ರ ಮೋದಿ ನಮ್ಮ ಮನ್ ಕಿ ಬಾತ್ ಕೇಳುವುದಿಲ್ಲ ಅವರ ಮನ್ ಕೀ ಬಾತ್ ಮಾತ್ರ ಕೇಳಬೇಕು. ಇಡೀ ದೇಶ ಅವರು ಹೇಳುವುದನ್ನಷ್ಟೆ ಕೇಳಬೇಕಿದೆ ಎಂದು ಟೀಕಿಸಿದರು. ಸದ್ಯ ರಾಜ್ಯದಲ್ಲಿ ಬರಗಾಲ ಇದ್ದು, ನರೇಗಾ ಕಾಮಗಾರಿ ಹೆಚ್ಚಿಸಬೇಕಿದೆ. ಆದರೆ ಕೇಂದ್ರ ಸರ್ಕಾರ ನರೇಗಾ ಬಜೆಟ್ ಕಡಿಮೆ ಮಾಡಿದೆ. ಕೇಂದ್ರ ಸರ್ಕಾರವನ್ನು ಕೇಳುವವರಾರು? ಪ್ರತಿ ವರ್ಷ ನರೇಗಾ ಬಜೆಟ್ ಏರಿಸುತ್ತ ಬದಲಾಗಿದೆ. ಆದರೆ ಈ ಸಲ ಶೇ. 18ರಷ್ಟು ನರೇಗಾ ಬಜೆಟ್ ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸಂಸತ್ನಲ್ಲಿಯೇ ನರೇಂದ್ರ ಮೋದಿ ನರೇಗಾ ವಿರೋಧಿಸಿ ಭಾಷಣ ಮಾಡಿದ್ದರು. ಈಗ ಶೇ. 18ರಷ್ಟು ಬಜೆಟ್ ಕಡಿಮೆ ಮಾಡಿದ್ದಾರೆ. ಇದರಿಂದ ಅವರಿಗೆ ಈ ಯೋಜನೆಯಲ್ಲಿ ಆಸಕ್ತಿ ಎಲ್ಲ ಎನ್ನುವುದು ಗೊತ್ತಾಗುತ್ತದೆ. ಆದರೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ನರೇಗಾಗೆ ದುಡ್ಡು ಕೊಟ್ಟರೂ ದೇಶದ ಆರ್ಥಿಕತೆ ಬೆಳೆಯುತ್ತದೆ. ಆದರೆ ಕೇಳುವವರಾರು? ಇಡೀ ದೇಶ ಅವರು ಹೇಳುವುದನ್ನಷ್ಟೇ ಕೇಳಬೇಕು ಎಂದರು.