ಧಾರವಾಡ: ಮಹಿಳೆಯರು ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇಂದು ಚಾಲನೆ ನೀಡಿದರು. ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ದೀಪ ಬೆಳಗಿಸುವ ಮೂಲಕ ಚಾಲನೆ ಕೊಟ್ಟರು.
ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ತಾವು ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಪ್ರಥಮ ಬಾರಿಗೆ 82 ಲಕ್ಷ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆಯಲಿದ್ದಾರೆ. ಇಂದು 40 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿಸಿದರು.
ಹಲವು ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ಮುಂದೆ ಅನುಷ್ಠಾನಕ್ಕೆ ತರ್ತಿವಿ. ವಿರೋಧ ಪಕ್ಷ ಬಿಜೆಪಿ ಇದೀಗ ಟೀಕೆ ಮಾಡುತ್ತಿದೆ. ಭಯ ಪಡುವ ಅವಶ್ಯಕತೆ ಇಲ್ಲ, ಎಲ್ಲವನ್ನೂ ಅನುಷ್ಠಾನ ಮಾಡ್ತೀವಿ. 2 ಲಕ್ಷ ಮಹಿಳೆಯರು ಧಾರವಾಡ ಜಿಲ್ಲೆಯಲ್ಲಿ ಪ್ರಯಾಣ ಮಾಡ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಇದು ಅನುಕೂಲ ಆಗುತ್ತದೆ. ಮನೆ ಮನೆಗೆ ದುಡ್ಡು ಹಂಚುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. 60 ಸಾವಿರ ಕೋಟಿ ಹಣ ಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.
80 ಸಾವಿರ ಕೋಟಿ ಇದ್ದರೂ ಸಹ ಸಿದ್ದರಾಮಯ್ಯ ಅದನ್ನ ನೀಡಲು ಉತ್ಸುಕರಾಗಿದ್ದಾರೆ. ಈ 60 ಸಾವಿರ ಕೋಟಿ ಜಿಡಿಪಿ ಬೆಳವಣಿಗೆಗೆ ಅನುಕೂಲ ಆಗಲಿದೆ. ನರೇಗಾ ಯೋಜನೆ ಸೇರಿ ಹಲವು ಯೋಜನೆ ಮತ್ತೆ ಆ ಹಣ ಮಾರ್ಕೆಟ್ ಗೆ ಬರುತ್ತೆ. ಮೋದಿ ಪ್ರಧಾನಿ ನರೇಗಾ ಬಗ್ಗೆ ಟೀಕೆ ಮಾಡಿದ್ರು. ಆದ್ರೆ ಇದೀಗ ನರೇಗಾದಿಂದ ಪ್ರಚಾರ ಪಡೆದು ಹಣ ಕೊಟ್ಟಿದ್ದೇವೆ ಅಂತಾರೆ. ಮುಂದಿನ 5 ವರ್ಷ ಅವಧಿಯಲ್ಲಿ ಕರ್ನಾಟಕದ ಜಿಡಿಪಿಗೆ ಇದು ಅನುಕೂಲ ಆಗಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ರಮ ಅನುಷ್ಠಾನಕ್ಕೆ ತರ್ತಿವಿ ಅನ್ನೋ ಭರವಸೆಯನ್ನು ಸಚಿವರು ನೀಡಿದರು.
ಸನ್ಮಾನ ಸ್ವೀಕರಿಸಿಲು ಲಾಡ್ ನಿರಾಕರಣೆ: ಶಕ್ತಿ ಯೋಜನೆ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆ ಆಯೋಜಿಸಿದ್ದ ಸನ್ಮಾನವನ್ನು ಲಾಡ್ ನಿರಾಕರಿಸಿದರು. ಉದ್ಘಾಟನೆ ನಂತರ ವಾಯವ್ಯ ಸಾರಿಗೆ ಸಂಸ್ಥೆಯಿಂದ ಸನ್ಮಾನ ಮಾಡಲು ತಯಾರಿ ಮಾಡಿಕೊಂಡಿತ್ತು. ಆದರೆ ವಾಯವ್ಯ ಸಾರಿಗೆ ಎಂಡಿ ಭರತ ಕೈ ಕುಲುಕಿ ಸನ್ಮಾನ ಬೇಡ ಎಂದು ಲಾಡ್ ತಿಳಿಸಿ, ಕೈ ಕುಲುಕಿದ್ದೇ ಸನ್ಮಾನ ಎಂದು ಎಂಡಿಗೆ ಹೇಳಿದರು.
ಹಸಿರು ನಿಶಾನೆ ತೋರಿದ ಲಾಡ್: ಹೊಸ ಬಸ್ ನಿಲ್ದಾಣದಿಂದ ಬೈಲಹೊಂಗಲಕ್ಕೆ ಹೊರಟಿದ್ದ ಬಸ್ಗೆ ಸಚಿವ ಲಾಡ್ ಹಸಿರು ನಿಶಾನೆ ತೋರಿಸಿದರು. ಬಳಿಕ ನಿರ್ವಾಹಕಿಗೆ ಹೂಮಾಲೆ ಹಾಕಿದ್ದಾರೆ. ಬಸ್ ನಲ್ಲಿ ಮಹಿಳೆಗೆ ಉಚಿತ ಟಿಕೆಟ್ ಕೊಡುವ ಮೊದಲು ನಿರ್ವಾಹಕಿಗೆ ಹಾರ ಹಾಕಿದರು. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಮಹಿಳೆಗೆ ಉಚಿತ ಟಿಕೆಟ್ ಕೊಟ್ಟು ಬಸ್ ಗೆ ಗ್ರೀನ್ ಸಿಗ್ನಲ್ ತೋರಿಸಿದರು.