ಧಾರವಾಡ: "ಅಳ್ನಾವರ ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಮಾಡಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಹಿಂದಿನ ಸರ್ಕಾರಗಳಲ್ಲಿ ಇದಕ್ಕಾಗಿ ಕಲ್ಪನೆಗಳನ್ನು ಕೊಟ್ಟಿದ್ದರೂ ಅಭಿವೃದ್ಧಿ ಆಗಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿ ಆರಂಭವಾಯಿತು. ಇವತ್ತು ಇಡೀ ದೇಶದಲ್ಲಿ ಸಣ್ಣ ಪಟ್ಟಣಗಳ 508 ರೈಲ್ವೇ ನಿಲ್ದಾಣ ನವೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಇಂದು ಧಾರವಾಡದ ಅಳ್ನಾವರ ರೈಲ್ವೆ ನಿಲ್ದಾಣ ನವೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. "ರೈಲ್ವೇ ಎಂದರೆ ಜನ ಬಂದೇ ಬರ್ತಾರೆಂದು ಭಾವಿಸಿ ಸ್ವಚ್ಛತೆ ಮಾಡುತ್ತಿರಲಿಲ್ಲ. ಮೋದಿ ಬಂದ ಮೇಲೆ ಸ್ವಚ್ಛತೆಗೆ ವೇಗ ಕೊಟ್ಟರು. ಇನ್ನು, ದೊಡ್ಡ ನಗರದ ರೈಲ್ವೇ ನಿಲ್ದಾಣಗಳಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡುತ್ತೇವೆ, ಇವುಗಳು ಜನಾಕರ್ಷಣೆಯ ಕೇಂದ್ರವಾಗಲಿದೆ" ಎಂದರು.
"ಮೇಲ್ಸೇತುವೆ, ಸೇತುವೆ ಅಗಲೀಕರಣ ಕಾಮಗಾರಿ ಕೂಡಾ ಆರಂಭವಾಗಿವೆ. ದೆಹಲಿ-ವಾರಣಾಸಿ ವಂದೇ ಭಾರತ್ ರೈಲು ಆರಂಭವಾಗಲಿದೆ. ಪೆಟ್ರೋಲಿಯಂ ಅನ್ನು ನಾವು ಹೊರಗಿನಿಂದ ಆಮದು ಮಾಡಿಕೊಳ್ಳುತ್ತೇವೆ. ವಿದ್ಯುದೀಕರಣದ ಮೂಲದ ಮೊದಲು 20 ಸಾವಿರ ಕಿಲೋ ಮೀಟರ್ ದೂರ ರೈಲುಗಳು ಚಲಿಸುತ್ತಿದ್ದವು. ಆದರೆ ಈಗ 37 ಸಾವಿರ ಕಿ.ಮೀಗೆ ಹೆಚ್ಚಿಸಲಾಗಿದೆ" ಎಂದು ತಿಳಿಸಿದರು.
ಅಮೃತ್ ಭಾರತ್ ಸ್ಟೇಷನ್ ಯೋಜನೆ: ಅಮೃತ್ ಯೋಜನೆಯಡಿ ದೇಶದ 508 ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಮೂಲಕ ದೇಶದ ಒಟ್ಟು 1,309 ರೈಲು ನಿಲ್ದಾಣಗಳ ಪುನಾರಾಭಿವೃದ್ಧಿಗೆ ಅಮೃತ್ ಭಾರತ್ ಸ್ಟೇಷನ್ ಯೋಜನೆ ಜಾರಿಗೊಳಿಸಲಾಗಿದೆ. ಇಂದು ಪುನರಾಭಿವೃದ್ಧಿಗೆ ಚಾಲನೆ ನೀಡಿರುವ 508 ನಿಲ್ದಾಣಗಳಿಗಾಗಿ 24,470 ಕೋಟಿ ರೂ ವೆಚ್ಚ ಮಾಡಲಾಗುತ್ತದೆ. ಒಟ್ಟು 508 ರೈಲು ನಿಲ್ದಾಣಗಳ ಪೈಕಿ ಕರ್ನಾಟಕದ 13 ನಿಲ್ದಾಣ, ಉತ್ತರ ಪ್ರದೇಶದಲ್ಲಿ 55, ರಾಜಸ್ಥಾನದಲ್ಲಿ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 32, ಅಸ್ಸಾಂನಲ್ಲಿ 32, ಒಡಿಶಾದಲ್ಲಿ 25, ಪಂಜಾಬ್‌ನಲ್ಲಿ 22, ಗುಜರಾತ್‌ನಲ್ಲಿ 21, ತೆಲಂಗಾಣದಲ್ಲಿ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶದಲ್ಲಿ 18, ತಮಿಳುನಾಡಿನ 18, ಹರಿಯಾಣದ 15 ನಿಲ್ದಾಣಗಳು ನವೀಕರಣಗೊಳ್ಳಲಿವೆ.
ಇದನ್ನೂ ಓದಿ: ಕರ್ನಾಟಕದ 13 ಸೇರಿ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ.. I.N.D.I.A ಒಕ್ಕೂಟದ ವಿರುದ್ಧ ಟೀಕೆ