ಹುಬ್ಬಳ್ಳಿ/ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಲಯ ನಿಯಮಾವಳಿ ಪರಿಷ್ಕರಣೆ, ಪಿಂಚಣಿ ಅನುದಾನ, ನೀರಿನ ಶುಲ್ಕದ ಬಡ್ಡಿ ಮನ್ನಾ, ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ, ಪೌರ ಕಾರ್ಮಿಕರ ನೇರ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇಂದು ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ್ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ವಲಯ ನಿಯಮಾವಳಿ ಪರಿಷ್ಕರಿಸುವ ಬಗ್ಗೆ:
ಕ್ರೆಡಾಯ್ ಸಂಸ್ಥೆಯಿಂದ ಬಂದಂತಹ ಪ್ರತಿನಿಧಿಗಳು ಹುಬ್ಬಳ್ಳಿ ಧಾರವಾಡ ನಗರಕ್ಕೆ ಈಗಾಗಲೇ ಮಂಜೂರಾದ ವಲಯ ನಿಯಮಾವಳಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಅದರಲ್ಲಿ ಕೆಲವೊಂದು ನ್ಯೂನ್ಯತೆಗಳು ಹಾಗೂ ಲೋಪದೋಷಗಳನ್ನು ವಿವರಿಸುತ್ತಾ ಈ ಸಂಬಂಧವಾಗಿ ಸರಿಪಡಿಸಲು ಕೂಡಲೇ ತಿದ್ದುಪಡಿ ಮಾಡಲು ಅಗತ್ಯ ಕ್ರಮವನ್ನು ಒಂದು ತಿಂಗಳ ಒಳಗಾಗಿ ತಗೆದುಕೊಳ್ಳುವಂತೆ ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ್ ಅವರು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸದಂತೆ ಪಿಂಚಣಿ ಅನುದಾನ:
ಸರ್ಕಾರದಿಂದ ಒಟ್ಟು ಪಿಂಚಣಿ ಅನುದಾನ 115 ಕೋಟಿ ನೀಡುವುದು ಬಾಕಿ ಇದೆ. ಈಗಾಗಲೇ 52 ಕೋಟಿಗಳ ಬಿಡುಗಡೆ ಅನುಮೋದನೆ ಆಗಿದ್ದು, ಈ ಪೈಕಿ 26 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ. ಇನ್ನುಳಿದ 26 ಕೋಟಿ ರೂ.ಗಳನ್ನು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಒಂದು ವಾರದೊಳಗೆ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರು ನಗರ ಯೋಜನಾ ಇಲಾಖೆ ಶಶಿಕುಮಾರ್, ಬಿ ಬಿ ಕಾವೇರಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಕೆ ಯು ಐ ಡಿ ಎಫ್ ಸಿ ಎಂ ಡಿ ಚಾರುಲತಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ ಸುರೇಶ್ ಇಟ್ನಾಳ್, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಎಂಡಿ ಶಕೀಲ್ ಅಹ್ಮದ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.