ಧಾರವಾಡ: ಭಾರತ ಲಾಕ್‌ಡೌನ್ ವಿಸ್ತರಣೆ ಹಿನ್ನೆಲೆ ಲಾಕ್‌ಡೌನ್ ನಿರ್ಬಂಧವನ್ನು ಎಲ್ಲರೂ ಪಾಲಿಸಬೇಕು. ಭಾರತದ ಭವಿಷ್ಯದ ದೃಷ್ಟಿಯಿಂದ ಪ್ರಧಾನಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾದರೆ ಕೆಲ ಸಡಿಲಿಕೆ ಎನ್ನುವುದು ಪ್ರಧಾನಿ ಮಾತಿನಿಂದ ತಿಳಿದಿದೆ. ಸದ್ಯದ ಮಟ್ಟಿಗೆ ನಾಗರಿಕರು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಸ್ವಯಂ ಶಿಸ್ತು ಕಾಪಾಡಿಕೊಳ್ಳಬೇಕು. ಅದರಿಂದ ಮಾತ್ರ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎಂದಿದ್ದಾರೆ.
ಏಪ್ರಿಲ್ 20ರ ಬಳಿಕ ಸ್ವಲ್ಪ ವಿನಾಯ್ತಿ ನೀಡುವ ಸಾಧ್ಯತೆ ಇದೆ. ಸಂಯಮ ಮತ್ತು ಸ್ವಯಂ ನಿಯಂತ್ರಣ ಹಾಕಿಕೊಳ್ಳೋಣ. ಪೊಲೀಸರು ಸಾಕಷ್ಟು ಬಲಪ್ರಯೋಗ ಮಾಡುತ್ತಿದ್ದಾರೆ. ಆದರೂ ಜನ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ವಿನಾ ಕಾರಣ ಓಡಾಡೋದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ 5 ಜನರಿಗೆ ಸೋಂಕು ತಗುಲಿದೆ. ಬೆಳಗಾವಿಯಲ್ಲಿ ಕೂಡ ಕುಡಚಿ ಹಾಗೂ ಬಾಗೆವಾಡಿಯಲ್ಲಿ ಹೆಚ್ಚಿನ ಸೊಂಕಿತರು ಇದ್ದಾರೆ. ದೆಹಲಿಯಿಂದ ಬಂದ ತಬ್ಲಿಘಿಗಳಿಂದ ಹೆಚ್ಚು ಸೋಂಕು ಹಬ್ಬಿದೆ. ಬೆಳಗಾವಿಯಲ್ಲಿ ಉಳಿದ ಕೆಲ ತಾಲೂಕಿನಲ್ಲಿ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಜನರೇ ಅರ್ಥ ಮಾಡಿಕೊಂಡು ನಿಯಂತ್ರಣಕ್ಕೆ ಒಳಗಾಗಲಿ ಎಂದರು.