ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನು ನಂಬಿ ಮೋಸ ಹೋದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಸರಿಯಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬ ಬಿಟ್ಟು ಬೇರೆ ಯಾರನ್ನೂ ಬೆಳೆಸಿಲ್ಲ. ಆದ್ದರಿಂದ ಕಾಂಗ್ರೆಸ್ ನಂಬಿ ಮೋಸ ಹೋಗಿರುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದು ನಿಜ. ಅವರು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಬಿಜೆಪಿ ಜೊತೆಗೆ ಇದ್ದಿದ್ದರೆ, ಇದುವರೆಗೆ ಅಧಿಕಾರದಲ್ಲಿ ಇರುತ್ತಿದ್ದರು. ಹಿಂದಿನಿಂದಲೂ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿಯೇ ಇತರ ಎಲ್ಲಾ ಪಕ್ಷಗಳು ಹುಟ್ಟಿಕೊಂಡಿವೆ. ಬಿಜೆಪಿ ಮತ್ತು ಜೆಡಿಎಸ್ ಇದು ನ್ಯಾಚ್ಯುರಲ್ ಅಲೈಯನ್ಸ್ ಇದೆ. ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಜೆಡಿಎಸ್ ನಮಗೆ ಬೆಂಬಲ ಕೊಟ್ಟರೆ ಯಾವತ್ತೂ ಸ್ವಾಗತ ಇದೆ. ಸಭಾಪತಿ ಕೆಳಗಿಳಿಸಲು ಜೆಡಿಎಸ್ ನಮ್ಮ ಜೊತೆಗೆ ಕೈಜೋಡಿಸಿದರೆ ಒಳ್ಳೆಯದು ಎಂದರು.
‘ಕಾಂಗ್ರೆಸ್ ಮುಳುಗುತ್ತಿರುವ ಹಡುಗು, ಅಸ್ತಿತ್ವ ಕಳೆದುಕೊಂಡ ಜೆಡಿಎಸ್.. ಬಿಜೆಪಿಗೆ ಉಜ್ವಲ ಭವಿಷ್ಯ’
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು ಈ ವಿಚಾರ ವರಿಷ್ಠರಿಗೆ ಬಿಟ್ಟದ್ದು. ಇನ್ನು ನಾನು ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಅನ್ನೋದು ಕೇವಲ ಊಹಾಪೋಹ. ಬೆಳಗಾವಿ ಅಭ್ಯರ್ಥಿ ಬಗ್ಗೆ ಈವರೆಗೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂದರು.