ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ದುಪ್ಪಟ್ಟು ತಯಾರಿ ಮಾಡಿಕೊಳ್ಳಿ ಹಾಗೂ ಮುಂಜಾಗೃತವಾಗಿ 2000 ಆಕ್ಸಿಜನ್ ಬೆಡ್ ಸಿದ್ಧವಿರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕೋವಿಡ್ ಸಿದ್ದತೆಗಳ ಕುರಿತಾಗಿ ಕಿಮ್ಸ್ ಆಡಳಿತ ಭವನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಆಕ್ಸಿಜನ್ ಸೌಲಭ್ಯವುಳ್ಳ ಬೆಡ್ ಗಳ ಕೊರತೆಯಾಗಬಾರದು ಎಂದು ಕಿಮ್ಸ್ನಲ್ಲಿ 1000, ಧಾರವಾಡ ಎಸ್.ಡಿ.ಎಂ ನಲ್ಲಿ 500 ಹಾಗೂ ಇತರ ಖಾಸಗಿ ಆಸ್ಪತ್ರೆಗಳಲ್ಲಿ 500 ಆಕ್ಸಿಜನ್ ಬೆಡ್ಗಳನ್ನು ಸಿದ್ದ ಇರಿಸಲಾಗುವುದು.
ಸದ್ಯ ಕಿಮ್ಸ್ ನಲ್ಲಿ ಕೋವಿಡ್ ಗಾಗಿ 500 ಆಕ್ಸಿಜನ್ ಬೆಡ್ ಗಳು ಸಿದ್ದವಾಗಿವೆ. 111 ಕೋವಿಡ್ ರೋಗಿಗಳು ದಾಖಲಾಗಿದ್ದು, 53 ಜನರನ್ನು ವೆಂಟಿಲೇಟರ್ ಮೇಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್‌ನಲ್ಲಿರುವ 20 ಕೆ.ಎಲ್. ಮೆಡಿಕಲ್ ಆಕ್ಸಿಜನ್ ಸಾಮರ್ಥ್ಯವನ್ನು 40 ಕೆ.ಎಲ್ಗೆ ಹೆಚ್ಚಿಸಲಾಗಿದೆ. ಜಿಂದಾಲ್ ನಿಂದ ಹೆಚ್ಚುವರಿ 20 ಕೆ.ಎಲ್. ಮೆಡಿಕಲ್ ಆಕ್ಸಿಜನ್ ಸರಬಾರಾಜು ಮಾಡುತ್ತಿದ್ದಾರೆ. 40 ಕೆ.ಎಲ್ ಸಾಮರ್ಥ್ಯದಲ್ಲಿ 1,200 ಜನರಿಗೆ ಆಕ್ಸಿಜನ್ ನೀಡಬಹುದು. ಜಿಲ್ಲೆಯಲ್ಲಿ ಆಕ್ಸಿಜನ್ ಸಿಲಿಂಡರ್ಗಳ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿಲ್ಲ. ಕೇಂದ್ರ ಸರ್ಕಾರಕ್ಕೂ ಮೆಡಿಕಲ್ ಆಕ್ಸಿಜನ್ ಸರಬರಾಜು ಮಾಡುವಂತೆ ಕೋರಲಾಗಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 134 ವೆಂಟಿಲೇಟರ್‌ಗಳಿವೆ. 634 ಕೋವಿಡ್ ಸಕ್ರಿಯ ಪ್ರಕರಣಗಳಿವೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತ ಲಾಭುರಾಮ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಠಾಣಿ, ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.