ಹುಬ್ಬಳ್ಳಿ : ಕೊರೊನಾ ವೈರಸ್ ತಪಾಸಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಮ್ಸ್ನಲ್ಲಿ 2ನೇ ವೈರಾಲಜಿ ಲ್ಯಾಬ್ ಹಾಗೂ ಬ್ಯಾಂಕ್ ಆಫ್ ಬರೋಡಾ ಹಾಗೂ ಸಂಜಯ್ ಮೆಡಿಕಲ್ಸ್ ವತಿಯಿಂದ ಕಿಮ್ಸ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವ ಇ-ವೆಹಿಕಲ್ಗೆ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ಉತ್ತರ ಕರ್ನಾಟಕದ ಸಂಜೀವಿನಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ದಿನದಿಂದ ದಿನಕ್ಕೆ ಸಾವಿರಾರು ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳನ್ನು ವ್ಯವಸ್ಥಿತವಾಗಿ ಕರೆದುಕೊಂಡು ಹೋಗುವ ಸದುದ್ದೇಶದಿಂದ ಇ-ವೆಹಿಕಲ್ ಸೇವೆ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಹಾಗೂ ಸಂಜಯ್ ಮೆಡಿಕಲ್ಸ್ ಇಂದು ಕಿಮ್ಸ್ ಆಸ್ಪತ್ರೆಗೆ ವಾಹನವನ್ನು ಹಸ್ತಾಂತರ ಮಾಡಿವೆ.
ಬಳಿಕ ವೈರಾಲಜಿ ಲ್ಯಾಬ್ ಪರಿಶೀಲನೆ ನಡೆಸಿ ಮಾತನಾಡಿದ ಸಚಿವ ಶೆಟ್ಟರ್, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ತಪಾಸಣೆ ಮಾಡುವ ಹಿನ್ನೆಲೆಯಲ್ಲಿ ವೈರಾಲಜಿ ಲ್ಯಾಬ್ ಸ್ಥಾಪನೆ ಮಾಡಲಾಗಿತ್ತು. ಅಲ್ಲದೇ ಐಸಿಎಂಆರ್ ನಿರ್ದೇಶನದ ಮೇರೆಗೆ ಮತ್ತೊಂದು ವೈರಾಲಜಿ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಕೋವಿಡ್-19 ತಪಾಸಣೆ ಫಲಿತಾಂಶ 24 ಗಂಟೆಗಳಲ್ಲಿಯೇ ಬರಲಿದೆ ಎಂದು ಅವರು ಹೇಳಿದರು.
ಈಗಾಗಲೇ ಹುಬ್ಬಳ್ಳಿಯಲ್ಲಿ ನಾಲ್ಕು ವೈರಾಲಜಿ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಎರಡು, ಎನ್‌ಎಂಆರ್ ಸ್ಕ್ಯಾನ್ ಸೆಂಟರ್ ಒಂದು, ಡಿಮ್ಹಾನ್ಸ್ ಆಸ್ಪತ್ರೆಯಲ್ಲಿ ಒಂದು ಸ್ಥಾಪನೆ ಮಾಡಲಾಗಿದೆ. ದಿನಕ್ಕೆ ಒಂದು ಲ್ಯಾಬ್ 250 ಮಾದರಿ ತಪಾಸಣೆ ಮಾಡಲಾಗುತ್ತದೆ ಎಂದು ಸಚಿವ ಶೆಟ್ಟರ್ ಹೇಳಿದರು.
ಇದೇ ವೇಳೆ ಮಾತನಾಡಿದ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ರೋಗಿಗಳನ್ನು ವ್ಯವಸ್ಥಿತ ರೀತಿ ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗಲು ಸೇವೆಯನ್ನು ಪ್ರಾರಂಭಿಸಲಾಗಿದೆ. ಅಲ್ಲದೇ ಮೊದಲು ವ್ಹೀಲ್‌ಚೇರ್ ಹಾಗೂ ಸ್ಟ್ರೆಚರ್ ಮೂಲಕ ಕರೆದುಕೊಂಡು ಹೋಗಲಾಗುತ್ತಿತ್ತು. ಇದು ಒಂದು ವಾರ್ಡ್ನಿಂದ ಮತ್ತೊಂದು ವಾರ್ಡ್ಗೆ ಕರೆದುಕೊಂಡು ಹೋಗಲು ಅನುಕೂಲವಾಗಲಿದೆ.
ಈಗ ಒಂದು ಬಾರಿ ಇಬ್ಬರು ರೋಗಿಗಳನ್ನು ಹಾಗೂ ಎರಡು ಜನ ಅಟೆಂಡರ್ಗಳನ್ನು ಕರೆದುಕೊಂಡು ಹೋಗುವ ಸಾಮರ್ಥ್ಯವನ್ನು ಇ-ವೆಹಿಕಲ್ ಹೊಂದಿದೆ ಎಂದರು. ಬಳಿಕ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ಬಾರಿಗೆ ಕಿಮ್ಸ್ ಆಸ್ಪತ್ರೆ ಯಶಸ್ವಿ ಪ್ಲಾಸ್ಮಾ ಥೆರಪಿ ಮಾಡಲಾಗಿದೆ. ಸೋಂಕಿತ ವ್ಯಕ್ತಿ ಗುಣಮುಖವಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದರು.