ಹುಬ್ಬಳ್ಳಿ: ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದವರಿಂದಲೇ ಉತ್ತರ ಪ್ರದೇಶದ ಮಾದರಿಯಲ್ಲಿ ಹಣ ವಸೂಲಿಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಗಲಭೆ ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಕಾನೂನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳು, ಕಾನೂನು ತಜ್ಞರೊಂದಿಗೆ ಸಭೆ ಕೂಡ ನಡೆಸಿದ್ದಾರೆ. ಬೆಂಗಳೂರು ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಮಾಹಿತಿ ಕಲೆ ಹಾಕುತ್ತಿದೆ. ದೇಶಕ್ಕೆ ಮಾರಕವಾದ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ಗಲಭೆಯಲ್ಲಿ ಭಯೋತ್ಪಾದಕರ ಕೈವಾಡವಿದೆಯೇ ಎಂಬ ಕುರಿತು ಸಹ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತು ಮಾತನಾಡಿದ ಶೆಟ್ಟರ್, ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಆಚರಣೆ ಬೇಡವೆಂದು ಹೇಳಿಲ್ಲ. ಮಂದಿರ, ದೇವಸ್ಥಾನದಲ್ಲಿ ಆಚರಣೆ ಮಾಡುವಂತೆ ತಿಳಿಸಿದೆ. ಕೊರೊನಾ ಆತಂಕವಿರುವ ಕಾರಣ ರಸ್ತೆ ಮಧ್ಯದಲ್ಲಿ ಆಚರಣೆ ಬೇಡವೆಂದು ಸ್ಪಷ್ಟನೆ ನೀಡಿದರು.