ಧಾರವಾಡ: ಎಸ್ಸಿ ಮತ್ತು ಎಸ್ಟಿ ಮಕ್ಕಳಿಗೆ ಸೀಟು ಖಾಲಿ ಇಲ್ಲ ಎಂದು ಹೇಳಿ ಅವರಿಗೆ ಹಾಸ್ಟೆಲ್ ನಿರಾಕರಿಸಬಾರದು ಎಂದು ಸುತ್ತೋಲೆ ಹೊರಡಿಸಿದ್ದೇವೆ. ಇದರ ಉದ್ದೇಶ ಶಿಕ್ಷಣವನ್ನು ಉತ್ತೇಜಿಸುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು. ಧಾರವಾಡದ ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧಾರವಾಡ ಹಾಸ್ಟೆಲ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 450 ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ನಲ್ಲಿ ತಂಗಲು ಅವಕಾಶವಿದೆ. ಆದರೆ, ಇಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ ಎಂದರು.
ಇನ್ನೊಂದಿಷ್ಟು ಕೊಠಡಿಗಳನ್ನು ನಿರ್ಮಾಣ ಮಾಡುತ್ತೇವೆ. ಊಟವನ್ನು ಚೆನ್ನಾಗಿ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ನಮ್ಮ ಸರ್ಕಾರದ ಆದ್ಯತೆ ಎಂದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಪೌಷ್ಟಿಕಾಂಶಯುಕ್ತ ಆಹಾರ ಕೊಡುವುದು ಎಂದರು. ಕೆಲವು ವಿದ್ಯಾರ್ಥಿಗಳು ಹಾಸಿಗೆ ಸಮೇತ ಗ್ರಂಥಾಲಯದಲ್ಲಿ ಇರುವುದರ ಬಗ್ಗೆ ಮಾತನಾಡಿ, ಕೊಠಡಿಗಳಲ್ಲಿ ಏಳೆಂಟು ವಿದ್ಯಾರ್ಥಿಗಳಿರುವುದರಿಂದ ಕೆಲವರು ಗ್ರಂಥಾಲಯದಲ್ಲಿ ಹೆಚ್ಚು ಓದುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಇರಬಹುದು ಎಂದು ಹೇಳಿದರು.
ನಾವು ಹೆಚ್ಚು ಹಾಸ್ಟಲ್ಗಳನ್ನು ತೆರೆಯಬೇಕು, ಯಾವುದೇ ವಿದ್ಯಾರ್ಥಿಯನ್ನು ಫೀಸ್ ಕಟ್ಟಿಲ್ಲ ಎಂದು ಶಾಲೆಗೆ ದಾಖಲಿಸಿಕೊಳ್ಳುವುದನ್ನು ನಿರಾಕರಣೆ ಮಾಡಬಾರದು ಎಂದು ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ ಎಂದರು. ಕಿಯೋನಿಕ್ಸ್ ಎಂಡಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವುದರ ಕುರಿತು ಮಾತನಾಡಿ, ಅವರ ವಿರುದ್ಧ ದೂರು ಕೊಟ್ಟಿದ್ದರೆ ತನಿಖೆಯಾಗುತ್ತದೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ: ಇದಕ್ಕೂ ಮೊದಲು, ಸಚಿವ ಮಹದೇವಪ್ಪ ಅವರು ಅಂಗರಕ್ಷಕನ ಕೈಯಿಂದ ಶೂ ಹಾಕಿಸಿಕೊಂಡ ಘಟನೆ ನಡೆಯಿತು. ಹಾಸ್ಟೆಲ್ನ ಅಡುಗೆ ಮನೆಗೆ ಭೇಟಿ ನೀಡಿದ್ದ ಸಂದರ್ಭ ಸಚಿವರು ಶೂ ಹೊರಗಡೆಯೇ ಬಿಚ್ಚಿಟ್ಟಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ, ಟೀಕೆಗೆ ಕಾರಣವಾಗಿದೆ.
ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಬಗ್ಗೆ ಸಚಿವ ಮಹದೇವಪ್ಪ ಸ್ಪಷ್ಟನೆ: ಅಂಗ ರಕ್ಷಕರು ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ. ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟ. ಹಾಗಾಗಿ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ. ಬಹು ವರ್ಷಗಳ ಕಾಲದಿಂದ ನನ್ನೊಡನೆಯೇ ಒಂದು ಕುಟುಂಬದಂತಿರುವ ನಮ್ಮ ಕೆಲವು ಸಿಬ್ಬಂದಿ ಬಳಿ ಕಾಲಿನ ಸಮಸ್ಯೆ ಹಿನ್ನೆಲೆ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದೆ. ದೈಹಿಕ ತೊಂದರೆಗಾಗಿ ಪಡೆದ ಸಹಾಯವನ್ನು ಸಂಕುಚಿತ ಮನಸ್ಸಿನಿಂದ ನೋಡಬಾರದೆಂದು ನಮ್ಮ ಮಾಧ್ಯಮ ಮಿತ್ರರಲ್ಲಿ ನಾನು ಮನವಿ ಮಾಡುತ್ತೇನೆ. ಇನ್ನು ಅಗತ್ಯ ಸಹಾಯಕ್ಕಾಗಿ ನನ್ನ ಅಂಗರಕ್ಷಕನಿಗೆ ನನ್ನ ಧನ್ಯವಾದಗಳು ಎಂದು ಸಚಿವ ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನ ಒಬ್ಬೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಗೆ ಆಗುವುದಿಲ್ಲ: ಡಿ ಕೆ ಶಿವಕುಮಾರ್ ಟಾಂಗ್