ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ಅನ್ನೋದು ಕಿರಿಕ್ ಪಾರ್ಟಿ ಇದ್ದಂಗೆ. ಕಾಂಗ್ರೆಸ್ ನಾಯಕರು ಬರೀ ಕಿರಿಕ್ ಮಾಡ್ತಾರೆ. ಇತ್ತೀಚೆಗೆ ಅವರು ಸುಳ್ಳು ಹೇಳೋದನ್ನು ಕಲಿತಿದ್ದಾರೆ ಎಂದು ಸಚಿವ ಬಿ ಶ್ರೀರಾಮುಲು ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಶಾಸಕ ಪ್ರೀತಂ ಗೌಡ ಕಾಂಗ್ರೆಸ್ಗೆ ಅರ್ಜಿ ಹಾಕಿದ್ದಾರೆ ಎನ್ನಲಾದ ವಿಚಾರಕ್ಕೆ ಪ್ರತಿಕ್ರಿಯಿಸಿ 10-20 ಜನ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಅಂತ ಹೇಳುತ್ತಿದ್ದಾರೆ. ಎಷ್ಟು ಸುಳ್ಳು ಹೇಳುತ್ತಾರೆ ನೋಡಿ. ಸೋಲಿನ ಹತಾಶೆಯಿಂದ ಪಾಪ ಈ ರೀತಿ ಮಾತನಾಡುತ್ತಿದ್ದಾರೆ. ಇಲ್ಲಿ ಅಷ್ಟೇ ಅಲ್ಲದೆ, ಗೋವಾದಲ್ಲಿ ಹೋಗಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ನವರು ಯಾವುದೇ ಸುದ್ದಿಯಲ್ಲಿಲ್ಲ, ಹಾಗಾಗಿ ಟಿಆರ್ಪಿ ಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರೊಬ್ಬ ಪಕ್ಷದ ಹಿರಿಯ ನಾಯಕ. ಪ್ರತಿಪಕ್ಷ ನಾಯಕ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ಆಗುವ ಸಾಮರ್ಥ್ಯ ಅವರಿಗಿದೆ. ಅಲ್ಪಸಂಖ್ಯಾತರಿಂದ ವೋಟ್ ಮಾತ್ರ ಹಾಕಿಸಿಕೊಂಡ ಬಳಿಕ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನ ಸಿದ್ದರಾಯಮ್ಯ ಮಾಡಿದರು. ಅಹಿಂದ ನಾಯಕ ಅಂತ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಮುಸ್ಲಿಂ ಮತಗಳನ್ನು ಪಡೆದು ಅವರಿಗೆ ಮೋಸ ಮಾಡಿದರು ಎಂದು ಆರೋಪಿಸಿದರು.
ರಾಜ್ಯದಲ್ಲಿ ಶೇಕಡಾ 18 ರಷ್ಟು ಮುಸ್ಲಿಂರಿದ್ದಾರೆ. ಆದ್ರೆ ಅವರಿಗೆ ಯಾವುದೇ ಸ್ಥಾನಮಾನವನ್ನ ಕಾಂಗ್ರೆಸ್ ನೀಡಿಲ್ಲ. ಇಷ್ಟಿದ್ದರೂ ಸಿದ್ದರಾಯಮ್ಯ ತಾನೇ ಅಹಿಂದ ನಾಯಕ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದ್ರೆ ಸಿಎಂ ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಶ್ರೀರಾಮುಲು ಸವಾಲು ಹಾಕಿದರು.
ಸಿದ್ದರಾಮಯ್ಯ ಅವರು ಮುಂದೆ ಸ್ಪರ್ಧಿಸುವ ಕ್ಷೇತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯಗೆ 5 ಕಡೆಯಿಂದ ಕ್ಷೇತ್ರದ ಜನರು ಕರೆಯುತ್ತಿದ್ದಾರಂತೆ. ಅವರಿಗೆ 224 ಕಡೆಯೂ ಕರೆದಿರಬಹುದು ಅಂತ ವ್ಯಂಗ್ಯವಾಡಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ