ಹುಬ್ಬಳ್ಳಿ: ಬೆಂಗಳೂರಿನಿಂದ ವಿಶೇಷ ಬಸ್ಗಳಲ್ಲಿ ಭಾನುವಾರ ತಡರಾತ್ರಿ ನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದ ವಲಸೆ ಕಾರ್ಮಿಕರನ್ನು ಅಧಿಕಾರಿಗಳು ಬರಮಾಡಿಕೊಂಡು ವೈದ್ಯಕೀಯ ತಪಾಸಣೆ ನಡೆಸಿದರು.
ಧಾರವಾಡ ಜಿಲ್ಲಾಡಳಿತದಿಂದ ಪ್ರಯಾಣಿಕರಿಗೆ ಶುದ್ಧ ಕುಡಿಯವ ನೀರು, ಆಹಾರ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿತ್ತು. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಮಾಜ ಕಲ್ಯಾಣ ಹಾಸ್ಟೆಲ್ಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಆಗಮಿಸಿದ ಪ್ರತಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಶಾಸಕರಾದ ಅರವಿಂದ ಬೆಲ್ಲದ್ ಹುಬ್ಬಳ್ಳಿ ಬಸ್ ನಿಲ್ದಾಣಣಕ್ಕೆ ಆಗಮಿಸಿ ಪ್ರಯಾಣಿಕರ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಜಿಲ್ಲಾಡಳಿತ, ಪೊಲೀಸ್, ಆರೋಗ್ಯ, ಸಾರಿಗೆ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ವಲಸೆ ಕಾರ್ಮಿಕರ ನೋಡಲ್ ಅಧಿಕಾರಿ ಪುರುಷೋತ್ತಮ್, ಹುಬ್ಬಳ್ಳಿ ವಾಕರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ರಾಮನಗೌಡರ್, ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಪಾಲಿಕೆ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.