ಧಾರವಾಡ: ರಾಜ್ಯ ಸರ್ಕಾರ ವಿಧಾನಮಂಡಲದ ಅಧಿವೇಶನದಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿರುವ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸದೆ, ಅತೀವೃಷ್ಟಿಯಲ್ಲಿ ನಿರಾಶ್ರಿತರಿಗೆ ಸೂಕ್ತ ಪರಿಹಾರ ಒದಗಿಸದೇ ಇರುವುದರಿಂದ ಈ ಭಾಗದ ಸಾರ್ವಜನಿಕರಿಗೆ ಹೆದರಿ ಭಯ ಭೀತರಾಗಿ ಬೆಂಗಳೂರಿನಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳಿಗೆ ಅವಕಾಶ ನೀಡದೇ ಅಧಿವೇಶನ ನಡೆಸುತ್ತಿರುವುದು ಕಾನೂನು ವಿರೋಧವಾಗಿದೆ. ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಅಧಿವೇಶನದಲ್ಲಿ ಮಾಧ್ಯಮಗಳಿಗೆ ಅವಕಾಶ ನೀಡುವಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮನವಿ ರವಾನಿಸಿದರು.