ಧಾರವಾಡ: ಜಿಲ್ಲೆಯಲ್ಲಿ ಹಿಂಗಾರು ಮಳೆ ಕೈ ಕೊಟ್ಟ ಪರಿಣಾಮ ಮಾವಿನ ಹಣ್ಣಿನ ಇಳುವರಿ ಕಡಿಮೆಯಾಗಿದೆ. ನಿರೀಕ್ಷಿಸಿದಷ್ಟು ಹಣ್ಣು ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಮಾವಿನ ಸವಿ ಬಯಸುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ರಾಜ್ಯದಲ್ಲಿ ಈ ವರ್ಷ ಮಾವಿನ ಇಳಿ ಹಂಗಾಮು ಇತ್ತಾದರೂ ವರ್ಷದ ಆರಂಭದಲ್ಲಿ ಮಾವಿನ ಮರಗಳ ತುಂಬಾ ಹೂವು ಬಿಟ್ಟಿದ್ದರಿಂದ ಜಿಲ್ಲೆಯಲ್ಲಿ ಮಾವಿನ ಇಳುವರಿ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಆದರೆ ತಾಪಮಾನ ಏರಿಕೆಯಿಂದ ತೇವಾಂಶ ಕಳೆದುಕೊಂಡ ಮಾವಿನ ಮರಗಳು ನಿರೀಕ್ಷಿತ ಫಸಲು ನೀಡಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆಯಾಗಿ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ 9018.97 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿತ್ತು. ಶೇ. 60ರಷ್ಟು ಪ್ರದೇಶದಲ್ಲಿ ಮಾವಿನ ಬೆಳೆ ಕುಸಿತ ಕಂಡಿದೆ. ಇನ್ನುಳಿದ ಪ್ರದೇಶದಲ್ಲಿ ಮಾವಿನ ಫಸಲು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಈ ವರ್ಷ ಒಟ್ಟು 53810.72 ಟನ್‌ನಷ್ಟು ಮಾವು ಉತ್ಪಾದನೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಶೇ. 40ರಿಂದ 50ರಷ್ಟು ಮಾವು ಉತ್ಪಾದನೆಯಾಗಿದೆ.
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು ಡಜನ್ ರತ್ನಗಿರಿ ಆಫಸ್ ( ಆಲಾನ್ಸೊ)600 ರಿಂದ 800 ರೂ., ದೇವಘಡ ಆಫಸ್ 500ರಿಂದ 600 ರೂ., ಕರೆ ಇಶಾಡಿ 500 ರೂ., ಪಾಳಾ ಆಫಸ್ 400 ರೂ., ಬೇನಿಷಾ 400 ರೂ., ಕಲ್ಮಿ ಮಾವಿನ ಹಣ್ಣು 350 ರೂ., ತೋತಾಪರಿ, ರಸಪರಿ, ಮಲಗೋಬಾ ಇನ್ನು ಮುಂತಾದ ತಳಿಯ ಮಾವಿನ ಹಣ್ಣುಗಳಲ್ಲೂ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.