ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ ಯುವಕ ಪತ್ನಿಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ಅದೃಷ್ಟವಶಾತ್ ಆಕೆ ಬದುಕುಳಿದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ದಲಿತ ಕುಟುಂಬದ ಹೆಣ್ಣುಮಗಳು ಗೀತಾ ಎಂಬಾಕೆ ಬದುಕು ನಡೆಸಲು ಸ್ವಸಹಾಯ ಗುಂಪಿನಲ್ಲಿ ಕೆಲಸ ಆರಂಭಿಸಿದ್ದಳು. ನಂತರ ಈಕೆಗೆ ಅಲ್ಲೊಬ್ಬ ಸವರ್ಣಿಯ ಜಾತಿಯ ಗಂಡಸಿನ ಪರಿಚಯವಾಗಿತ್ತು. ಪರಿಚಯ ಪ್ರೀತಿಯ ಮೂಲಕ ತಿರುಗಿ ಇಬ್ಬರು ಧರ್ಮಸ್ಥಳದಲ್ಲಿ ಮದುವೆ ಸಹ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಪತಿ ಅರ್ಜುನಗೌಡ ಪತ್ನಿ ಗೀತಾಳ ಜಾತಿ ಆದಾರದ ಮೇಲೆ ಗೊಬ್ಬರದ ಅಂಗಡಿ ತೆರೆದು ಲಾಭವನ್ನು ಸಹ ಪಡೆಯಲಾರಂಭಿಸಿದ್ದ. ಮೊದಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಯಾವಾಗ ಅರ್ಜುನ ಗೌಡನ ಮನೆಯವರಿಂದ ನಿತ್ಯವೂ ಗೀತಾಳ ಮೇಲೆ ಕಿರುಕುಳ ಶುರುವಾಯಿತೋ ಆಗ ದಲಿತ ಮಹಿಳೆ ಎನ್ನುವ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿ ಮನೆ ಬಿಟ್ಟು ಹೋಗು ಅಂತಲೂ ಆವಾಜ್ ಹಾಕಿದ್ದರಂತೆ. ಆದ್ರೆ ಅವೆಲ್ಲವನ್ನ ಮೆಟ್ಟಿ ನಿಂತ ಗೀತಾಳನ್ನ ಮುಗಿಸೋಕೆ ಅವರು ಪ್ಲಾನ್ ಮಾಡಿದ್ದರು.
ಗೀತಾಳ ಪತಿಯ ಮನೆಯವರು ಮತ್ತೊಂದು ಮದುವೆಗೆ ಸಿದ್ಧರಾಗಿದ್ದರಂತೆ, ಅದನ್ನು ಪ್ರಶ್ನಿಸಿದಕ್ಕೆ ಆಕೆಯನ್ನು ಮುಗಿಸುವ ಹಂತಕ್ಕೆ ಅವರು ಬಂದಿದ್ರು. ಅರ್ಜುನಗೌಡ ಸೇರಿದಂತೆ ಅವರ ಕುಟುಂಬದವರು ಶಿಗ್ಗಾವಿಯಿಂದ ಆಕೆಯನ್ನು ಅಪಹರಿಸಿ ಮನಬಂದಂತೆ ಥಳಿಸಿದ್ದಾರೆ. ನಂತರ ಅವಳು ಸತ್ತಿದ್ದಾಳೆ ಎಂದು ಭಾವಿಸಿ ದಾಂಡೇಲಿಯ ಕರ್ಕಿ ಹಳ್ಳದಲ್ಲಿ ಬಿಸಾಕಿ ಹೋಗಿದ್ರು.
ಆದ್ರೆ, ಹಳ್ಳಕ್ಕೆ ಬೀಳುತ್ತಿದ್ದಂತೆ ಎಚ್ಚರಗೊಂಡಿದ್ದ ಗೀತಾ ಅಲ್ಲಿಂದ ದಾಂಡೇಲಿ ಪೊಲೀಸರ ಸಹಾಯದಿಂದ ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದಾಳೆ. ಆದರೆ, ಪೊಲೀಸರು ಕೇವಲ 3 ಜನರನ್ನ ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನ ಬಂಧಿಸಬೇಕು ಅಂತ ಗೀತಾ ಒತ್ತಾಯ ಮಾಡಿದ್ದಾಳೆ. ಅಲ್ಲದೆ, ದಲಿತ ಪರ ಸಂಘಟನೆಗಳು ಸಹ ಸಂತ್ರಸ್ತೆ ಪರ ನಿಂತಿವೆ.
ಓದಿ: 20ಕ್ಕೂ ಹೆಚ್ಚು ಬಾರಿ ಇರಿದು ತಾಯಿ - ಮಗಳ ಭೀಕರ ಹತ್ಯೆ: ಬೆಂಗಳೂರಲ್ಲಿ ದುರಂತ