ಧಾರವಾಡ: ಐಷಾರಾಮಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿ ಹೋಟೆಲ್ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ವ್ಯಕ್ತಿಯೋರ್ವ ಪರಾರಿಯಾದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಕೋಟ್ಯಾಧೀಶ್ವರನ ವೇಷದಲ್ಲಿ ಬಂದು ಹೋಟೆಲ್ ಬಿಲ್ ಕಟ್ಟದೆ ಪರಾರಿಯಾಗಿದ್ದಾನೆ. ಭೀಮ್ಸೆಂಟ್ ಜಾನ್ ಎಂಬ ಹೆಸರಿನ ವ್ಯಕ್ತಿಯೇ ಹೋಟೆಲ್ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಿರುವ ಆರೋಪಿ. ನಾಲ್ಕು ದಿನಗಳಿಂದ ಧಾರವಾಡದ ದ್ವಾರವಾಟಾ ಐಷಾರಾಮಿ ಹೋಟೆಲ್ನಲ್ಲಿ ವ್ಯಕ್ತಿ ವಾಸ್ತವ್ಯ ಹೂಡಿದ್ದ. ನಾಲ್ಕು ದಿನ ಬೇಕಾಗಿದ್ದೆಲ್ಲ ತರಿಸಿಕೊಂಡು ಮಜಾ ಮಾಡಿದ್ದ ಆಸಾಮಿ ಏಕಾಏಕಿ ಹೋಟೆಲ್ನಿಂದ ಕಾಲ್ಕಿತ್ತಿದ್ದಾನೆ.
ವ್ಯಕ್ತಿ ಹೋಟೆಲ್ನಿಂದ ಹೊರ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೋಟೆಲ್ ಮ್ಯಾನೇಜರ್ನಿಂದ ಉಪನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಇದೇ ರೀತಿ ಈ ವ್ಯಕ್ತಿ ಹಲವು ಕಡೆಗಳಲ್ಲಿ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.