ಹುಬ್ಬಳ್ಳಿ: ಲಾಕ್‌ಡೌನ್ ವೇಳೆಯಲ್ಲೂ ಬಡ್ಡಿ ಕಟ್ಟುವಂತೆ ಬಡ ಕುಟುಂಬವೊಂದಕ್ಕೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಬೆಂಡಿಗೇರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸೆಟ್ಲಮೆಂಟ್ ಏರಿಯಾದ ನಿವಾಸಿ ಗಿರಿಯಪ್ಪ ಬಳ್ಳಾರಿ ಎಂಬಾತನೇ ಬಂಧಿತ ಆರೋಪಿ. ಈತನಿಂದ ಮಹಿಳೆಯೊಬ್ಬರು 80 ಸಾವಿರ ರೂ. ಸಾಲ ಪಡೆದಿದ್ದರು. ಹಾಗಾಗಿ ಪ್ರತಿ ತಿಂಗಳು 8 ಸಾವಿರ ರೂ. ಬಡ್ಡಿ ವಸೂಲಿ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಲಾಕ್‌ಡೌನ್ ಆಗಿದ್ದರಿಂದ ಆ ಮಹಿಳೆಗೆ ಬಡ್ಡಿ ನೀಡಲು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈತ ಪ್ರತಿನಿತ್ಯ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಪೊಲೀಸ್ ಕಮಿಷನರ್ ಆರ್.ದಿಲೀಪ್, ಎಸಿಪಿ ಅನುಷಾ ನೇತೃತ್ವದಲ್ಲಿ ತಂಡ ರಚಿಸಿದ್ದರು.
ಇನ್ನು ಎಸಿಪಿ ಅನುಷಾ ಮಹಿಳೆಯ ಮನೆಗೆ ತೆರಳಿ ವಿಚಾರಣೆ ಮಾಡಿ ಶನಿವಾರ ಸಂಜೆ ಆರೋಪಿ ಗಿರಿಯಪ್ಪ ಬಳ್ಳಾರಿಯನ್ನು ಬಂಧಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.